ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ತಾನು ಭಾರತ ತೊರೆಯುವುದಿಲ್ಲ ಹಾಗೂ ರಿಲಯನ್ಸ್ ಕಮ್ಯುನಿಕೇಷನ್ಸ್ ಸಮೂಹ ಸಂಸ್ಥೆಗಳು ವಂಚನೆ ಎಸಗಿರುವ ಆರೋಪದ ತನಿಖೆಗೆ ಸಹಕರಿಸುತ್ತೇನೆ ಎಂದು ಉದ್ಯಮಿ ಅನಿಲ್ ಅಂಬಾನಿ ಸುಪ್ರೀಂಕೋರ್ಟ್ಗೆ ಮುಚ್ಚಳಿಕೆ ಸಲ್ಲಿಸಿದ್ದಾರೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಹಾಗೂ ಅದರ ಸಮೂಹ ಸಂಸ್ಥೆಗಳು ವಂಚನೆ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿವೆ. ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ಇಎಎಸ್ ಶರ್ಮಾ ವಂಚನೆ ಸಂಬಂಧ ಪಿಐಎಲ್ ಸಲ್ಲಿಸಿದ್ದರು. ತಾನು ಜುಲೈ 2025ರಿಂದ ಭಾರತ ತೊರೆದಿಲ್ಲ ಮತ್ತು ಅಗತ್ಯವಾದರೆ ವಿದೇಶ ಪ್ರಯಾಣದ ಮೊದಲು ನ್ಯಾಯಾಲಯದ ಅನುಮತಿ ಪಡೆಯುವುದಾಗಿ ತಿಳಿಸಿದ್ದಾರೆ.
ಕಂಪನಿಗಳಲ್ಲಿ ತಾನು ಕಾರ್ಯನಿರ್ವಹಣೇತರ ಜವಾಬ್ದಾರಿ ಹೊಂದಿದ್ದು, ದೈನಂದಿನ ನಿರ್ವಹಣೆಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅಂಗಸಂಸ್ಥೆಗಳಾದ ರಿಲಯನ್ಸ್ ಇನ್ಫ್ರಾಟೆಲ್, ರಿಲಯನ್ಸ್ ಟೆಲಿಕಾಂ 2013ರಿಂದ 2017ರ ಅವಧಿಯಲ್ಲಿ ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟದಿಂದ 31,580 ಕೋಟಿ ರೂ. ಸಾಲ ಪಡೆದಿದ್ದವು. ಎಸ್ಬಿಐ ನೇಮಿಸಿದ್ದ ವಿಶೇಷ ಲೆಕ್ಕಪರಿಶೋಧನೆಯಿಂದ ನಿಧಿಗಳ ದುರುಪಯೋಗ, ಸಂಬಂಧವಿರದ ಸಾಲಗಳ ಮರುಪಾವತಿ, ಸಂಬಂಧಿತ ಪಕ್ಷದವರಿಗೆ ಹಣ ವರ್ಗಾವಣೆ, ಸಾಲ ಪಡೆದಿರುವುದನ್ನು ಶಾಶ್ವತವಾಗಿ ಮುಚ್ಚಿಹಾಕಿರುವುದು ಸೇರಿದಂತೆ ಗಂಭೀರ ಅಕ್ರಮಗಳು ಪತ್ತೆಯಾಗಿವೆ ಎಂಬ ಆರೋಪವಿದೆ.
ವಿದೇಶಗಳಲ್ಲಿ ಹಣ ದುರ್ಬಳಕೆ ಮತ್ತು ಅಂತಾರಾಷ್ಟ್ರೀಯ ವಹಿವಾಟುಗಳ ಮೂಲಕ ಫೆಮಾ ಮತ್ತು ಪಿಎಂಎಲ್ಎ ಕಾಯಿದೆಯ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮತ್ತು ನಿಯಂತ್ರಕ ಸಂಸ್ಥೆಗಳ ಪಾತ್ರವನ್ನು ತನಿಖಾ ಸಂಸ್ಥೆಗಳು ಸಮರ್ಪಕವಾಗಿ ಪರಿಶೀಲಿಸುತ್ತಿಲ್ಲ ಎಂದು ದೂರಿದ್ದಾರೆ.
ದೊಡ್ಡ ಪ್ರಮಾಣದ ಸಾರ್ವಜನಿಕ ಹಣ ಒಳಗೊಂಡಿರುವ ಈ ಪ್ರಕರಣದಲ್ಲಿ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಲು ನ್ಯಾಯಾಲಯದ ಮೇಲ್ವಿಚಾರಣೆ ಅಗತ್ಯವೆಂದು ಅರ್ಜಿಯಲ್ಲಿ ಹೇಳಲಾಗಿದೆ. ಫೆಬ್ರವರಿ 4ರಂದು ಸುಪ್ರೀಂ ಕೋರ್ಟ್, ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲು ನಿರ್ದೇಶಿಸಿ ವಂಚನೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದರೆ ಅದನ್ನೂ ಪರಿಶೀಲಿಸುವಂತೆ ಸಿಬಿಐಗೆ ಸೂಚಿಸಿತ್ತು.


