ಮಧ್ಯ ಪ್ರದೇಶದ ನೀಮಚ್ ಜಿಲ್ಲೆಯ ರಣಪುರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಜೇನುನೊಣ ದಾಳಿಯಿಂದ ಮಕ್ಕಳ ಪ್ರಾಣ ರಕ್ಷಿಸಿ ತನ್ನ ಜೀವವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.
ಅಂಗನವಾಡಿಯ ಕಾರ್ಯಕರ್ತೆಯ ಧೈರ್ಯ ಹಾಗೂ ಮಕ್ಕಳ ಮೇಲಿನ ಕಾಳಜಿ, ತ್ಯಾಗದಿಂದ 20 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮದವಾಡ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನು ನೊಣಗಳ ಹಿಂಡು ಇದ್ದಕ್ಕಿದ್ದಂತೆ ದಾಳಿ ನಡೆಸಿದೆ. ಅಂಗನವಾಡಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕಾಂಚನ್ ಬಾಯಿ ಮೇಘವಾಲ್, ತನ್ನ ಸುರಕ್ಷತೆಯ ಬಗ್ಗೆ ಯೋಚಿಸದೆ ಕೂಡಲೇ ಹತ್ತಿರದಲ್ಲಿ ಬಿದ್ದಿದ್ದ ಟಾರ್ಪಲ್‌ಗಳು ಮತ್ತು ಚಾಪೆ ಗಳನ್ನು ಹಿಡಿದುಕೊಂಡರು. ಮಕ್ಕಳನ್ನು ಅದರಲ್ಲಿ ಸುತ್ತಿ ತಾವು ಅಡ್ಡ ನಿಂತು ಅವರನ್ನು ರಕ್ಷಿಸಿಕೊಂಡು ಅಂಗನವಾಡಿಯ ಒಳಗೆ ಕಳುಹಿಸಿದರು. ಜೇನುನೊಣಗಳು ಮಕ್ಕಳಿಗೆ ಏನೂ ಮಾಡದಂತೆ ಕಾಂಚನ್ ಬಾಯಿ ಕಲ್ಲುಬಂಡೆಯಂತೆ ಅಡ್ಡ ನಿಂತಿದ್ದರು.
ಜೇನುನೊಣಗಳ ಹಿಂಡು ಅವರ ಮೇಲೆ ದಾಳಿ ಮಾಡಿತು. ನೂರಾರು ಜೇನು ನೊಣಗಳು ಕಚ್ಚಿದವು. ಆದರೂ ಮಕ್ಕಳು ಸುರಕ್ಷಿತರಾಗಿ ಒಳಗೆ ಹೋಗುವವರೆಗೂ ಅವರು ಹಿಂದೆ ಸರಿಯಲಿಲ್ಲ. ಗ್ರಾಮಸ್ಥರು ಸಹಾಯಕ್ಕೆ ಧಾವಿಸುವ ಹೊತ್ತಿಗೆ ಕಾಂಚನ್ ಬಾಯಿ ಕುಸಿದು ಬಿದ್ದಿದ್ದರು. ಬಳಿಕ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ಲೆಕ್ಕವಿಲ್ಲದಷ್ಟು ಜೇನುನೊಣಗಳು ಅವರ ದೇಹವನ್ನು ಕಡಿದಿವೆ. ಇದು ಅವರ ಧೈರ್ಯಕ್ಕೆ ಸಾಕ್ಷಿ. ಆಕೆ ಅಂಗನವಾಡಿ ಕಾರ್ಯಕರ್ತೆ ಮಾತ್ರವಲ್ಲ ಮಕ್ಕಳಿಗೆ ಅಮ್ಮನಂತಿದ್ದರು. ಜೈ ಮಾತಾ ದಿ ಸ್ವ-ಸಹಾಯ ಗುಂಪಿನ ಅಧ್ಯಕ್ಷೆಯಾಗಿದ್ದರು, ಅವರ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು. ಅವರ ಪತಿ ಶಿವಲಾಲ್ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಂಚನ್ ಬಾಯಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.


