Thursday, January 30, 2025
Menu

ಅಂಗನವಾಡಿ ಚಾವಣಿ ಕುಸಿದು ಮಕ್ಕಳಿಗೆ ಗಾಯ, ಕಾರ್ಯಕರ್ತೆಗೆ ಅಮಾನತು ಶಿಕ್ಷೆ

ಕೋಲಾರದ ಡಿಕೆಹಳ್ಳಿ ಗ್ರಾಪಂ ವ್ಯಾಪ್ತಿಯ ದಾಸರಹೊಸಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡದ ಚಾವಣಿಯ ಸಿಮೆಂಟ್ ಕುಸಿದ ಪರಿಣಾಮ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ನಾಲ್ಕು ಮಕ್ಕಳ ತಲೆ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಂಗನವಾಡಿ ಕೇಂದ್ರದಲ್ಲಿ ಒಟ್ಟು ೧೨ ಮಕ್ಕಳಿದ್ದು ಘಟನೆ ನಡೆದಾಗ ನಾಲ್ಕು ಮಕ್ಕಳು ಮಾತ್ರ ಹಾಜರಿದ್ದರು. ಗಾಯಗೊಂಡಿರುವ ಮಕ್ಕಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

೮ ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಅಂಗನವಾಡಿ ಕಟ್ಟಡದ ಚಾವಣಿ ಬಿರುಕು ಬಿಟ್ಟು ಮಳೆ ಬಂದರೆ ನೀರು ಸೋರುತ್ತಿತ್ತು. ಈ ಬಗ್ಗೆ ಹಲವು ಬಾರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಸ್ಥಳಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳ ಆರೋಗ್ಯದ ವೆಚ್ಚಗಳನ್ನು ನಾವು ಭರಿಸುವುದಾಗಿ ತಿಳಿಸಿದರು. ಕಾರ್ಯಕರ್ತೆ ಮಂಜುಳ ವಿರುದ್ದ ಸಾರ್ವಜನಿಕವಾಗಿ ಕಿಡಿಕಾರಿದ ಶಾಸಕರು, ಆಕೆಯನ್ನು ಅಮಾನತು ಮಾಡಿ ಕ್ರಮಕೈಗೊಳ್ಳುವಂತೆ ಸಿಡಿಪಿಒ ಮುನಿರಾಜುಗೆ ಸೂಚಿಸಿದರು.

ಅಂಗನವಾಡಿ ಕೇಂದ್ರಗಳು ತಾಲೂಕಿನಲ್ಲಿ ಹಲವು ಕಡೆ ಅವ್ಯವಸ್ಥೆಯಿಂದ ಕೂಡಿದ್ದರೂ ಆ ಕಡೆ ಅಧಿಕಾರಿಗಳು ಗಮನ ನೀಡುವುದಿಲ್ಲ. ಸಿಡಿಪಿಒ ಯಾವ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *