ರೇಡಿಯೋಲಾಜಿಸ್ಟ್‌ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಪ್ರಕರಣ ದಾಖಲಿಸಿದರೆ ಆನೇಕಲ್ ಪೊಲೀಸರು ಆಕೆಯ ವಿರುದ್ಧವೇ ಎಫ್‌ಐಆರ್ ದಾಖಲಿಸಿದ್ದು, ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣದಾಸೆಗೆ ಪೊಲೀಸರು ಆರೋಪಿ ಪರವಾಗಿ ಸಂತ್ರಸ್ತೆಯ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
ನ್ಯಾಯ ದೊರಕಿಸಿ ಕೊಡಿ ಎಂದು ಸಂತ್ರಸ್ತೆ ಬೇಡಿಕೊಂಡರೆ ಆನೇಕಲ್ ಪೊಲೀಸರು ದೂರಿನ ದಿಕ್ಕು ತಪ್ಪಿಸಲು ಮುಂದಾಗಿ ಸಂತ್ರಸ್ತೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆನೇಕಲ್ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ರೇಡಿಯಾಲಜಿಸ್ಟ್ ಜಯಕುಮಾರ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಸಂತ್ರಸ್ತೆ ವೀಡಿಯೊ ಸಮೇತ ಪೊಲೀಸ್‌ಗೆ ದೂರು ನೀಡಿದ್ದರು. ಠಾಣೆಗೆ ಬಂದ ಆರೋಪಿ ಜಯಕುಮಾರನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರು.
ಕರವೇ ಮತ್ತು ಸಾರ್ವಜನಿಕರ ಹೋರಾಟದ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿ ಪತ್ನಿ ಇಪ್ಪತ್ತು ದಿನಗಳ ಬಳಿಕ ಠಾಣೆಗೆ ಬಂದು ನೀಡಿದ ಸುಳ್ಳು ದೂರಿನ ಮೇಲೆ ಪೊಲೀಸರು ಸಂತ್ರಸ್ತೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಸಂತ್ರಸ್ತೆ ಹನಿಟ್ರಾಪ್, ರೋಲ್ ಕಾಲ್ ಮಾಡಲು ಬಂದಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದರು. ಆದರೆ ಇದಕ್ಕೆ ಯಾವುದೇ ಸಾಕ್ಷಿ ಇಲ್ಲದೆ ಸಂತ್ರಸ್ತೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖಾಧಿಕಾರಿ ಪೊಲೀಸ್ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿಯನ್ನು ಬದಲಾಯಿಸಬೇಕು, ಇಲ್ಲವಾದಲ್ಲಿ ಸಂತ್ರಸ್ತೆ ನೀಡಿದ ದೂರು ಹಳ್ಳ ಹಿಡಿಯುತ್ತದೆ. ಮೇಲಾಧಿಕಾರಿಗಳು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಬೇಕು, ಸಂತ್ರಸ್ತೆ ವಿರುದ್ಧ ದಾಖಲಿಸಿರುವ ಸುಳ್ಳು ದೂರನ್ನು ರದ್ದು ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


