Thursday, January 08, 2026
Menu

ವೆನೆಜುವೆಲಾ ಸಾರ್ವಭೌಮತ್ವಕ್ಕೆ ಅಮೆರಿಕದ ಪೆಟ್ಟು !

ಡ್ರಗ್ಸ್ ಟೆರರಿಸಂ ನಿಗ್ರಹದ ದಿಶೆಯಲ್ಲಿ ಅಮೆರಿಕ ಈಗ ಪುಟ್ಟ ದೇಶವಾದ ವೆನೆಜುವೆಲಾ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿರುವುದಕ್ಕೆ ಜಾಗತಿಕ ಮಟ್ಟದಲ್ಲಿ ಭಾರಿ ಪ್ರತಿರೋಧವೇನೂ ವ್ಯಕ್ತವಾಗಿಲ್ಲ. ಆದರೆ ದೇಶವೊಂದರ ಸಾರ್ವಭೌಮತ್ವ ಮತ್ತು ಆಂತರಿಕ ಆಡಳಿತದ ಮೇಲೆ ಡೊನಾಲ್ಡ್ ಟ್ರಂಪ್ ಎಸಗಿರುವ ಕೃತ್ಯ ಎಷ್ಟರಮಟ್ಟಿಗೆ ಸರಿ ಮತ್ತು ಸಮರ್ಥನೀಯ ಎಂಬುದು ಗಂಭೀರ ಪ್ರಶ್ನೆ.

ಪ್ರಪಂಚದ ಸೂಪರ್ ಪವರ್, ದೊಡ್ಡಣ್ಣನ ಆಕ್ರಮಣಕಾರಿ ಪ್ರವೃತ್ತಿ ಈಗ ಮತ್ತಷ್ಟು ಹೆಚ್ಚಾಗಿದೆ. ವೆನೆಜುವೆಲಾ ಮೇಲಿನ ಮಿಲಿಟರಿ ದಾಳಿಯನ್ನು ಅಮೆರಿಕ ಸಮರ್ಥಿಸಿದೆ. ಅಲ್ಲದೆ ಈಗ ಈ ದೇಶದಲ್ಲಿ ತನ್ನ ಸೇನಾಪಡೆಗಳನ್ನೂ ನಿಯೋಜಿಸಿದೆ. ದೊಡ್ಡಣ್ಣನ ತೈಲ ವ್ಯಾಪಾರಕ್ಕೆ ಅನುಕೂಲಕರವಾದ ಸನ್ನಿವೇಶವನ್ನು ನಿರ್ಮಿಸಿಕೊಳ್ಳುವ ದಿಶೆಯಲ್ಲಿ ಡೊನಾಲ್ಡ್ ಟ್ರಂಪ್ , ತಮ್ಮ ಬಲ ಪ್ರದರ್ಶಿಸುತ್ತಿರುವುದು ಗಮನಾರ್ಹ.

ಕೆರಿಬಿಯನ್ ದ್ವೀಪ ಸಮೂಹದಲ್ಲಿದ ಪ್ರಮುಖ ದ್ವೀಪ ರಾಷ್ಟ್ರವಾದ ವೆನೆಜುವೆಲಾ ಸಾರ್ವಭೌಮತ್ವದ ಮೇಲೆ ಅಮೆರಿಕ ತನ್ನ ಬಲ ಪ್ರಯೋಗಿಸುತ್ತಿರುವುದು ಪ್ರಪಂಚದ ಇತರ ದೇಶಗಳ ಮೇಲೆಯೂ ಗಂಭೀರ ಪರಿಣಾಮ ಬೀರಿದೆ. ಮಾದಕವಸ್ತುಗಳ ಉಗ್ರವಾದಕ್ಕೆ (ಡ್ರಗ್ಸ್ ಟೆರರಿಸಂ) ವೆನೆಜುವೆಲಾ ಪದಚ್ಯುತ ಅಧ್ಯಕ್ಷರು ಕುಮ್ಮಕ್ಕು ನೀಡಿದ್ದಾರೆಂಬ ಗುರುತರ ಆರೋಪಗಳ ಮೇಲೆ ಇವರನ್ನು ಬಂಧಿಸಿ ಕ್ರಮ ಕೈಗೊಳ್ಳುವ ಟ್ರಂಪ್ ನಿರ್ಧಾರಕ್ಕೆ ಅಗ್ರ ದೇಶಗಳಿಂದ ಯಾವ ತೀವ್ರ ವಿರೋಧವೂ ವ್ಯಕ್ತ ವಾಗಿಲ್ಲ. ಮಾದಕವಸ್ತುಗಳ ಉಗ್ರವಾದಕ್ಕೆ ವೆನೆಜುವೆಲಾ ದೇಶದ ಪದಚ್ಯುತ ಅಧ್ಯಕ್ಷರು ಹೇಗೆ ಕಾರಣ ಮತ್ತು ಹೊಣೆ ಎಂಬುದು ಇನ್ನೂ ತಿಳಿಯಲಾಗದ ಸಂಗತಿ. ಕೊಲಂಬಿಯಾ, ಬ್ರೆಜಿಲ್, ಚೀನಾ ಮೊದಲಾದ ದೇಶಗಳು ಅಮೆರಿಕ ಮಿಲಿಟರಿ ಕ್ರಮವನ್ನು ಖಂಡಿಸಿವೆ. ಅಲ್ಲದೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟನಿಯೋ ಗುಟೆರೆಸ್ ಕೂಡಾ ಈ ಬೆಳವಣಿಗೆಗಳಿಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಿಗಿಲಾಗಿ ಭಾರತವೂ ಇದಕ್ಕೆ ಆತಂಕ ವ್ಯಕ್ತಪಡಿಸಿದೆ.

ಐದು ವರ್ಷಗಳ ಹಿಂದೆ ರಷ್ಯಾ ದೇಶವು ತನ್ನ ಸಂಸ್ಕೃತಿ ಮತ್ತು ಭೌಗೋಳಿಕ ಪ್ರಮುಖ ಸಂಗತಿಗಳನ್ನು ಮುಂದಿಟ್ಟುಕೊಂಡು ಉಕ್ರೇನ್ ಮೇಲೆ ಸಮರ ಸಾರಿರುವುದು ಇಲ್ಲಿ ಗಮನಾರ್ಹ. ಇದು ಯುದ್ಧವಲ್ಲದೆ ಬೇರೇನೂ ಆಗಿಲ್ಲ. ಆದರೆ ರಷ್ಯಾ ಇದನ್ನು ಮಿಲಿಟರಿ ಕಾರ್ಯಾಚರಣೆ, ಯುದ್ಧವಲ್ಲ ಎಂದೇ ಪ್ರಪಂಚದ ಮುಂದೆ ಪ್ರತಿಪಾದಿಸಿದೆ. ಈಗ ಪ್ರಪಂಚದ ಮತ್ತೊಂದು ಪ್ರಬಲ ದೇಶವಾದ ಅಮೆರಿಕ, ದ್ವೀಪ ರಾಷ್ಟ್ರವಾದ ವೆನೆಜುವೆಲಾ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ವಿದ್ಯ ಮಾನಗಳ ಬೆನ್ನ ಹಿಂದೆಯೇ ಚೀನಾ ಈಗ ತೈವಾನ್ ಮೇಲೆ ಯಾವುದೇ ಸಮಯದಲ್ಲಿ ಮುಗಿಬೀಳುವ ಸಾಧ್ಯತೆಗಳು ಇಲ್ಲದೆ ಇಲ್ಲ. ಇಸ್ರೇಲ್ ಹಾಗೂ ಇರಾನ್ ನಡುವಣ ಸಮರಕ್ಕೆ ಈಗ ಬಿದ್ದಿರುವುದು ತಾತ್ಕಾಲಿಕ ತೆರೆಯಷ್ಟೆ. ಇದು ಮತ್ತೆ ಯಾವುದೇ ಸಮಯದಲ್ಲಿ ಭುಗಿಲೇಳಬಹುದು.

ಒಂದು ಕಡೆ ಅಮೆರಿಕ ತನಗೆ ಇಷ್ಟವಿಲ್ಲದ ದೇಶಗಳ ಮೇಲೆ ಆರ್ಥಿಕ ದಿಗ್ಬಂಧನವನ್ನು ವಿಧಿಸುವ ಮೂಲಕ ಎಚ್ಚರಿಕೆಯ ಸಂದೇಶ ನೀಡುತ್ತಿದೆ. ಮತ್ತೊಂದು ಕಡೆ ವೆನೆಜುವೆಲಾ ಅಂತಹ ಪುಟ್ಡ ದೇಶದ ಮೇಲೆ ಹಠಾತ್ ಆಗಿ ಮುಗಿ ಬಿದ್ದಿರುವುದು ಕಳವಳಕಾರಿ. ಒಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಈಗ ಸಂಭವಿಸುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಮೂರನೆ ಪ್ರಪಂಚ ಯುದ್ಧಕ್ಕೆ ಇದು ಕಾರಣ ಒದಗಿಸಬಹುದೆಂಬ ಆತಂಕವೀಗ ತಲೆ ಎತ್ತಿದೆ. ಈ ದಿಶೆಯಲ್ಲಿ ಭಾರತದ ವಿದೇಶಾಂಗ ನೀತಿ ಮತ್ತ್ತು ನಡೆ ವಿಶ್ವದ ಇತರ ದೇಶಗಳ ಗಮನಸೆಳೆದಿದೆ.

Related Posts

Leave a Reply

Your email address will not be published. Required fields are marked *