ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೆರವಾಗಿದ್ದ ಕ್ರೈಸ್ತರ ಧರ್ಮೀಯರ ಪರಮೋಚ್ಚ ಗುರುಪಟ್ಟಕ್ಕೆ ಅಮೆರಿಕದ ರಾಬರ್ಟ್ ಪ್ರೆವೋಸ್ಟ್ ಆಯ್ಕೆಯಾಗಿದ್ದಾರೆ. ಪೋಪ್ ಪಟ್ಟಕ್ಕೆ ಆಯ್ಕೆಯಾದ ಮೊದಲ ಅಮೆರಿಕನ್ ಇವರು. ಇವರ ಪೋಪ್ ಪಟ್ಟದ ಹೆಸರು 14ನೇ ಪೋಪ್ ಲಿಯೋ, ಇವರು 267ನೇ ಪೋಪ್ ಆಗಿದ್ದಾರೆ.
ಗುರುವಾರ ನಡೆದ 3ನೇ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಚಿಮಣಿಯಿಂದ ಬಿಳಿ ಹೊಗೆ ಕಾಣಿಸಿಕೊಂಡ ಬಳಿಕ ವ್ಯಾಟಿಕನ್‌ನ ಉನ್ನತ ಕಾರ್ಡಿನಲ್ ಇವರ ಹೆಸರನ್ನು ಘೋಷಣೆ ಮಾಡಿದ್ದಾರೆ.
ಬುಧವಾರ ಆರಂಭವಾದ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಸುತ್ತಿನಲ್ಲಿ ಸಿಸ್ಟಿನಾ ಚಾಪೆಲ್‌ನ ಚಿಮಣಿಯಿಂದ ಕಪ್ಪುಹೊಗೆ ಕಾಣಿಸಿಕೊಂಡು ಇನ್ನೂ ಆಯ್ಕೆಯಾಗಿಲ್ಲ ಎಂಬ ಸಂದೇಶ ರವಾನೆಯಾಗಿತ್ತು. ಗುರುವಾರ ನಡೆದ 2ನೇ ಸುತ್ತಿನ ಪ್ರಕ್ರಿಯೆಯಲ್ಲಿಯೂ ಯಾವುದೇ ಆಯ್ಕೆಯಾಗಿರಲಿಲ್ಲ. 3ನೇ ಸುತ್ತಿನಲ್ಲಿ ನೂತನ ಪೋಪ್ ಆಯ್ಕೆಯಾಗಿದ್ದಾರೆ. ಇದರ ಸಂದೇಶವಾಗಿ ಸಿಸ್ಟಿನಾ ಚಾಪೆಲ್ ಚಿಮಣಿಯಿಂದ ಬಿಳಿ ಹೊಗೆ ಕಾಣಿಸಿಕೊಂಡಿತು.
ಹೊಸ ಪೋಪ್ 133 ಕಾರ್ಡಿನಲ್‌ನಲ್ಲಿ ಕನಿಷ್ಠ 89 ಮತಗಳನ್ನು ಪಡೆದುಕೊಂಡಿದ್ದಾರೆ. ರಾಬರ್ಟ್ ಅವರು 2000 ವರ್ಷ ಇತಿಹಾಸ ಹೊಂದಿರುವ ವ್ಯಾಟಿಕನ್ ಮತ್ತು ಕ್ಯಾಥೋಲಿಕ್ ಕ್ರೈಸ್ತ ಪಂಗಡವನ್ನು ಮುನ್ನಡೆಸಲಿದ್ದಾರೆ. ಇವರ ಹಿಂದಿನ ಪೋಪ್ ಫ್ರಾನ್ಸಿಸ್ 12 ವರ್ಷ ಪೋಪ್ ಆಗಿ ಸೇವೆ ಸಲ್ಲಿಸಿದ್ದರು.