Menu

ಭಾರತದ ಮೇಲೆ ಶೇ.26ರಷ್ಟು ಸುಂಕ ವಿಧಿಸಿದ ಅಮೆರಿಕ

donald trump

ವಾಷಿಂಗ್ಟನ್: ಮಿತ್ರ ರಾಷ್ಟ್ರ ಎಂದು ಕರೆಯಲಾಗುವ ಭಾರತದ ಮೇಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.26ರಷ್ಟು ಸುಂಕ ವಿಧಿಸಿದ್ದು, ಬುಧವಾರದಿಂದಲೇ ನೂತನ ತೆರಿಗೆ ಜಾರಿಗೆ ಬರಲಿದೆ.

ಜಾಗತಿಕ ಮಟ್ಟದಲ್ಲಿ ಅಮೆರಿಕ ಆರಂಭಿಸಿರುವ ಸುಂಕ ಸಮರದಲ್ಲಿ ಭಾರತದ ಮೇಲೆ ತೆರಿಗೆ ಹೇರುವ ಕುರಿತು ಕುತೂಹಲ ಮೂಡಿತ್ತು. ಆದರೆ ಭಾರತದ ಮೇಲೆ ಕೂಡ ಶೇ.26ರಷ್ಟು ತೆರಿಗೆ ವಿಧಿಸಿದ್ದರಿಂದ ಬುಧವಾರ ಷೇರು ಮಾರುಕಟ್ಟೆ ರೆಡ್ ಅಲರ್ಟ್ ನೊಂದಿಗೆ ಆರಂಭವಾಗಿದೆ.

ಅಮೆರಿಕ ಹೆಚ್ಚುವರಿ ಶೇ.26ರಷ್ಟು ತೆರಿಗೆ ವಿಧಿಸಿದ್ದರಿಂದ ಇಂದು ಕೇಂದ್ರ ಸಚಿವ ಸಂಪುಟ ಸಭೆ ಮಹತ್ವ ಪಡೆದಿದ್ದು, ಸಂಪುಟ ಸಭೆಗೂ ಮುನ್ನ ತೆರಿಗೆ ಹೇರಿಕೆ ಕುರಿತು ಮಹತ್ವದ ಚರ್ಚೆ ಕರೆದಿದೆ.

ಅಮೆರಿಕಕ್ಕೆ ಭಾರತ ಅತೀ ಹೆಚ್ಚು ಔಷಧ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಅಲ್ಲದೇ ಎರಡೂ ದೇಶಗಳ ನಡುವೆ ಆಟೋಮೊಬೈಲ್, ಹರಳು, ಆಭರಣ ಮುಂತಾದವುಗಳ ಬೆಲೆಯಲ್ಲಿ ಭಾರೀ ವ್ಯತ್ಯಾಸ ಉಂಟಾಗಲಿದ್ದು, ಮಾರುಕಟ್ಟೆಯ ಮೇಲೆ ದೊಡ್ಡ ಹೊಡೆತ ನಿರೀಕ್ಷಿಸಲಾಗಿದೆ.

ಕೇಂದ್ರ ಸರ್ಕಾರ ತಜ್ಞರ ಜೊತೆ ಸಭೆ ಕರೆದಿದ್ದು, ತೆರಿಗೆ ಹೆಚ್ಚಳದಿಂದ ಭಾರತದ ಮೇಲಾಗುವ ಪರಿಣಾಮಗಳ ಕುರಿತು ಚರ್ಚೆ ನಡೆಸಲಿದೆ.

ಅಮೆರಿಕ ಇದಕ್ಕೂ ಮುನ್ನ ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಶೇ.27ರಷ್ಟು ತೆರಿಗೆ ವಿಧಿಸಿತ್ತು. ಇದನ್ನು ಖಂಡಿಸಿ ಅಮೆರಿಕದ ಉತ್ಪನ್ನಗಳ ಮೇಲೆ ಚೀನಾ ಕೂಡ ಶೇ.34ರಷ್ಟು ತೆರಿಗೆ ಹೇರಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಶೇ.104ರಷ್ಟು ತೆರಿಗೆ ವಿಧಿಸಿ ಸುಂಕ ಸಮರ ಸಾರಿದೆ.

Related Posts

Leave a Reply

Your email address will not be published. Required fields are marked *