ಶಾಂಘಾಯ್ ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ಗಟ್ಟಿ ಧ್ವನಿ ಮೂಡಿಸಿದೆ. ಪೆಹಲ್‌ಗಾವ್ ನರಮೇಧದಲ್ಲಿ ಉಗ್ರರ ಪಾತ್ರವಿರುವುದನ್ನು ಭಾರತವು ಈ ವೇಳೆ ಒತ್ತಿ ಹೇಳಿದೆ. ಶಾಂಘಾಯ್ ಶೃಂಗಸಭೆಯು ಭಾರತದ ರಾಜತಾಂತ್ರಿಕತೆಯ ಜಯದ ಮೊದಲ ಅಧ್ಯಾಯವೊಂದೇ ಅಲ್ಲ. ಭವಿಷ್ಯದಲ್ಲಿ ರಷ್ಯಾ ಮತ್ತು ಚೀನಾ ಅಲ್ಲದೆ ಉಳಿದ ದೇಶಗಳೂ ಅಮೆರಿಕವನ್ನು ನೇಪಥ್ಯಕ್ಕೆ ಸರಿಸಿ ಜಾಗತಿಕವಾಗಿ ಮುಂದೆ ಸಾಗಲು ಸಾಧ್ಯ ಎಂಬ ಎಚ್ಚರಿಕೆ ಮತ್ತು ಎದಿರೇಟು ಕೂಡಾ ಹೌದು.
ಶಾಂಘಾಯ್ ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ಗಟ್ಟಿ ಧ್ವನಿ ಮೂಡಿಸಿದೆ. ಪೆಹಲ್‌ಗಾವ್ ನರಮೇಧದಲ್ಲಿ ಉಗ್ರರ ಪಾತ್ರವಿರುವುದನ್ನು ಭಾರತವು ಈ ವೇಳೆ ಒತ್ತಿ ಹೇಳಿದೆ. ಜಾಗತಿಕ ಮಟ್ಟದಲ್ಲಿ ಇದನ್ನು ಸಂಪೂರ್ಣವಾಗಿ ದಮನಗೊಳಿಸಲು ಎಲ್ಲ ದೇಶಗಳೂ ಸಂಕಲ್ಪಬದ್ಧವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸುವ ದಿಶೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಈಗ ಯಶಸ್ವಿಯಾಗಿದ್ದಾರೆ.
ಈ ಸಭೆಯಲ್ಲಿ ಭಾರತದ ಪ್ರಧಾನಿ ತಮ್ಮ ಗಟ್ಟಿಯಾದ ಧ್ವನಿ ಮೂಡಿಸಲು ಸೂಕ್ತ ವೇದಿಕೆ ನಿರ್ಮಾಣವಾಗಿತ್ತೆಂಬುದು ಗಮನಾರ್ಹ. ಕಳೆದ ಸಾರಿ ಪಹಲ್‌ಗಾವ್ ನರಮೇಧ ಪ್ರಸ್ತಾಪ ಮತ್ತು ಉಗ್ರವಾದದ ಖಂಡನೆಗೆ ಚೀನಾ ಹಾಗೂ ಪಾಕಿಸ್ಥಾನವು ಮೂಗು ಮುರಿದಿದ್ದವು ! ಇದರಿಂದ ಭಾರತವು ಭಯೋತ್ಪಾದನೆ ವಿರುದ್ದ ಶೃಂಗಸಭೆಯಲ್ಲಿ ಪರಿಣಾಮಕಾರಿಯಾದ ಘೋಷಣೆಯನ್ನು ಮೊಳಗಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೇ ಭಾನುವಾರಂದು ಶಾಂಘಾಯ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಭಾರತವು ಚೀನಾ ಮತ್ತು ಪಾಕಿಸ್ಥಾನದ ಪ್ರಧಾನಿಗಳ ಸಮಕ್ಷಮದಲ್ಲಿ ಭಾರತದ ಪ್ರಧಾನಿ ಮೋದಿ ಪೆಹಲ್‌ಗಾವ್ ಘಟನೆಗಳ ಬಗ್ಗೆ ಗಮನಸೆಳೆದಿದ್ದು ಮಹತ್ವಪೂರ್ಣ.
ಪ್ರಸಕ್ತ ಶಾಂಘಾಯ್ ಸಭೆಯ ಸಮಯ ಮತ್ತು ಸನ್ನಿವೇಶ ಅತಿ ಮುಖ್ಯ. ಚೀನಾ ಮತ್ತು ರಷ್ಯಾ ಜೊತೆಗಿನ ಭಾರತದ ಎಲ್ಲ ವಲಯಗಳಲ್ಲಿನ ಸಂಬಂಧಗಳು ಹತ್ತಿರವಾಗ ತೊಡಗಿವೆ. ಕಳೆದ ಮೂರು ನಾಲ್ಕು ವಾರಗಳ ಅವಧಿಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯವು ತೋರಿದ ರಾಜತಾಂತ್ರಿಕತೆಯ ಫಲವಾಗಿ ರಷ್ಯಾ ಮತ್ತು ಚೀನಾ ಜೊತೆ ಭಾರತದ ಸಂಬಂಧಗಳು ಉತ್ತಮ ಫಲಗಾಣುವು ದಿಶೆಯಲ್ಲಿ ಹೆಜ್ಜೆಗಳು ಮೂಡಿವೆ. ಇದನ್ನು ಗಮನಿಸಿದ ಅಮೆರಿಕ ದಿಢೀರ್ ಆಗಿ ಸೋಮವಾರ ದಂದು ಭಾರತದ ಮೇಲಿನ ತನ್ನ ನಿಲುವನ್ನು ತುಸು ಸಡಿಲಿಸಿದೆ. ಅಲ್ಲದೆ ಭಾರತ ಮತ್ತು ರಷ್ಯಾ ನಡುವಣ ದ್ವಿಕ್ಷೀಯ ಮಾತುಕತೆಯನ್ನು ಅಮೆರಿಕದ ಮಾರ್ಕೋ ರೂಬಿಯೋ ಸ್ವಾಗತಿಸಿರುವುದು ಗಮನಾರ್ಹ.
ರಷ್ಯಾ ಜೊತೆಗಿನ ತೈಲ ಖರೀದಿ ಒಪ್ಪಂದವನ್ನು ಭಾರತವು ಈ ಕೂಡಲೆ ರದ್ದುಗೊಳಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಭಾರತಕ್ಕೆ ಮತ್ತಷ್ಡು ಸುಂಕಭಾರ ಮತ್ತು ಕಠಿಣ ನಿರ್ಬಂಧಗಳು ಕಾದಿವೆ ಎಂದು ಎಚ್ಚರಿಸಿದ್ದ ಟ್ರಂಪ್ ಆಡಳಿತದ ಸಹವರ್ತಿಗಳು ಈಗ ಶಾಂಘಾಯ್ ಫಲಶೃತಿಯನ್ನು ಕಂಡು ತುಸು ಬಾಲ ಮುದುಡಿಕೊಳ್ಳುವಂತಾಗಿದೆ. ಈಗ ಯೂರೋಪಿಯನ್ ಒಕ್ಕೂಟದ ದೇಶಗಳೂ ಅಮೆರಿಕದ ಏಕಸಾಮ್ಯದ ಧೋರಣೆಗಳನ್ನು ಒಪ್ಪಲು ಸಿದ್ದವಿಲ್ಲ. ಇತ್ತ ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಅತಿ ದುಬಾರಿಯಾದ ಸುಂಕವನ್ನು ವಿಧಿಸಿ ಪ್ರತ್ಕಕ್ಷವಾಗಿ ತೊಂದರೆಗಳನ್ನು ಒಡ್ಡಿz ದೊಡ್ಡಣ್ಣನನ್ನು ಎದುರಿಸುವ ದಿಶೆಯಲ್ಲಿ ಭಾರತವೀಗ ಮೊದಲ ಘಟ್ಟದಲ್ಲಿ ಯಶಸು ಕಂಡಿದೆ.
ಚೀನಾ ಮತ್ತು ರಷ್ಯಾ ದೇಶಗಳು ಭಾರತದ ಜೊತೆ ವ್ಯಾಪಾರ ಮತ್ತು ಇತರೆ ವಲಯಗಳಲ್ಲಿ ಉತ್ತಮ ಸಂಬಂಧಗಳನ್ನು ಮುಂದುವರಿಸಿದಲ್ಲಿ ಇದರಿಂದ ಅಧಿಕ ಲಾಭ ಚೀನಾ ಮತ್ತು ರಷ್ಯಾಗೆ ಎಂಬುದರಲ್ಲಿ ಅನುಮಾನವಿಲ್ಲ. ಇದೇ ವೇಳೆ ಈ ಒಪ್ಪಂದ ಗಳು ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳಿಂದ ಅಮೆರಿಕಕ್ಕೆ ಆಗುವ ನಷ್ಟವೂ ಅಧಿಕ ಎಂಬುದನ್ನು ಮರೆಯುವಂತಿಲ್ಲ. ಶಾಂಘಾಯ್ ಶೃಂಗಸಭೆಯು ಭಾರತದ ರಾಜತಾಂತ್ರಿಕತೆಯ ಜಯದ ಮೊದಲ ಅಧ್ಯಾಯವೊಂದೇ ಅಲ್ಲ. ಭವಿಷ್ಯದಲ್ಲಿ ರಷ್ಯಾ ಮತ್ತು ಚೀನಾ ಅಲ್ಲದೆ ಉಳಿದ ದೇಶಗಳೂ ಅಮೆರಿಕವನ್ನು ನೇಪಥ್ಯಕ್ಕೆ ಸರಿಸಿ ಜಾಗತಿಕವಾಗಿ ಮುಂದೆ ಸಾಗಲು ಸಾಧ್ಯ ಎಂಬ ಎಚ್ಚರಿಕೆ ಮತ್ತು ಎದಿರೇಟು ಕೂಡಾ ಹೌದು.