Menu

ನನ್ನ ಸೋಲಿಗೆ ಸಾರ್ವಕರ್ ಕಾರಣ ಅಂತ ಅಂಬೇಡ್ಕರ್ ಬರೆದಿದ್ದಾರೆ: ಸಿದ್ದರಾಮಯ್ಯ

siddaramiah

ಬೆಂಗಳೂರು: ಚುನಾವಣೆಯಲ್ಲಿ ನನ್ನ ಸೋಲಿಗೆ ಸಾವರ್ಕರ್ ಕಾರಣ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ. ಆದರೆ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಮನುವಾದಿಗಳು ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ವಿಧಾನಸೌಧದಲ್ಲಿ ಸೋಮವಾರ ನಡೆದ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುವಾದಿಗಳು ಇದ್ದಕಿದ್ದಂತೆ ಅಂಬೇಡ್ಕರ್ ಮೇಲೆ ಪ್ರೀತಿ ಬಂದಂತೆ ಆಡುತ್ತಿದ್ದಾರೆ. ಆದರೆ ಸಂವಿಧಾನವನ್ನು ಮೊದಲಿಗೆ ವಿರೋಧಿಸಿದ್ದು ಇವರೇ. ಸಂವಿಧಾನದ ಜಾರಿಯನ್ನು ವಿರೋಧಿಸಿದ್ದವರೇ ಈ ಮನುವಾದಿಗಳು ಎಂದು ಟೀಕಿಸಿದರು.

ಎಸ್ಸಿ/ಎಸ್ಟಿ ಸಮುದಾಯದ ಅಭಿವೃದ್ಧಿಗೆ ನಿಗದಿಪಡಿಸಿದ 8300 ಕೋಟಿ scsp/tsp ಹಣ ದುರುಪಯೋಗ ಪಡಿಸಿಕೊಂಡಿದ್ದು ಬಿಜೆಪಿ. ಇವರು ನಾಚಿಕೆ ಇಲ್ಲದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಬಜೆಟ್ ಗಾತ್ರ ಹೆಚ್ಚಾದಂತೆ scp/ tsp ಹಣ ಹೆಚ್ಚಾಗಬೇಕು. ಆದರೆ ಬಿಜೆಪಿ ಸರ್ಕಾರ ಕಡಿಮೆ ಮಾಡಿತು‌. ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಯೋಜನಾಗಾತ್ರಕ್ಕೆ ತಕ್ಕಂತೆ ಹೆಚ್ಚಿಸಿದ್ದೀವಿ. ಈ ಬಾರಿ 42018 ಕೋಟಿ ರೂ. ನಾವು ತೆಗೆದಿಟ್ಟಿದ್ದೀವಿ ಎಂದು ಅವರು ನುಡಿದರು.

ಅಂಬೇಡ್ಕರ್ ಜಯಂತಿ ಅಂಗವಾಗಿ ಸೋಮವಾರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಅಂಬೇಡ್ಕರ್ ಅವರ ಆಶಯಗಳ ಜಾರಿಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನಮ್ಮ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ ಎಂದರು.

ವಿದ್ಯಾವಂತರೇ ಹೆಚ್ಚು ಜಾತಿವಾದಿಗಳಾಗುತ್ತಿರುವುದು ಸರಿಯಲ್ಲ. ಶಿಕ್ಷಣದ ಉದ್ದೇಶ ಜಾತಿವಾದಿಗಳಾಗುವುದಲ್ಲ. ಬಾಬಾ ಸಾಹೇಬ್ ಒಬ್ಬ ವ್ಯಕ್ತಿ ಇಡೀ ದೇಶದ ಶಿಕ್ಷಣ ವಂಚಿತ ನೂರಾರು ಜಾತಿ ಸಮುದಾಯಗಳಿಗೆ ಶಿಕ್ಷಣ ಸಿಗಲು ಕಾರಣಕರ್ತರಾದರು ಎಂದು ಅವರು ಹೇಳಿದರು.

ಮುಸಲ್ಮಾನರು ಶಿಕ್ಷಣದಿಂದ ವಂಚಿತರಾಗಬಾರದು, ಅವಕಾಶಗಳಿಂದ ವಂಚಿತರಾಗಬಾರದು, ಹೀಗಾಗಿ ಸಂವಿಧಾನ ಹೇಳಿದಂತೆ ನಾವು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಅವಕಾಶ ಕಲ್ಪಿಸುತ್ತಿದ್ದೇವೆ. ಇಷ್ಟಕ್ಕೇ ಕಾಂಗ್ರೆಸ್ ಬರೀ ಮುಸಲ್ಮಾನರನ್ನು ಓಲೈಸುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.

ಬಹುತ್ವದ ದೇಶ ನಿರ್ಮಾಣಕ್ಕೆ, ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರು ಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ನುಡಿದರು.

ಸರಾಯಿ ಬೇಡ, ಶಾಲೆ ಬೇಕು ಎನ್ನುವುದು ದಲಿತ ಸಂಘರ್ಷ ಸಮಿತಿ ಹೋರಾಟದ ಘೋಷಣೆಯಾಗಿತ್ತು. ನಾನು ಉಪಮುಖ್ಯಮಂತ್ರಿ ಆದ ತಕ್ಷಣ ಊರು ಊರಲ್ಲಿ ವಸತಿ ಶಾಲೆ ಆರಂಭಿಸಿದೆ. ಮುಂದಿನ ಆರ್ಥಿಕ ವರ್ಷದ ಕೊನೆಯ ವೇಳೆಗೆ ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ ತೆರೆದಿರುತ್ತವೆ ಎಂದು ಅವರು ಹೇಳಿದರು.

Related Posts

Leave a Reply

Your email address will not be published. Required fields are marked *