ವಾರ್ಷಿಕ ಅಮರನಾಥ ಯಾತ್ರೆ ಜುಲೈ 1 ರಿಂದ ಆರಂಭವಾಗಲಿದೆ. ಈ ಯಾತ್ರೆ ಮಾರ್ಗವನ್ನು ಜುಲೈ 1 ರಿಂದ ಆಗಸ್ಟ್ 10ರವರೆಗೆ ಹಾರಾಟ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ.
ಯಾತ್ರೆಯ ಸಮಯದಲ್ಲಿ ಭಯೋತ್ಪಾದಕ ಬೆದರಿಕೆಯನ್ನು ತಡೆಯುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಯಾತ್ರಾ ಮಾರ್ಗವನ್ನು ಹಾರಾಟ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ಈ ಸಮಯದಲ್ಲಿ ಯಾವುದೇ ಸರ್ಕಾರೇತರ ಡ್ರೋನ್, ವಿಮಾನಗಳು, ಹೆಲಿಕಾಪ್ಟರ್ಗಳು ಈ ಪ್ರದೇಶದಲ್ಲಿ ಹಾರಲು ಸಾಧ್ಯವಾಗುವುದಿಲ್ಲ. ಅನುಮಾನಾಸ್ಪದ ಚಟುವಟಿಕೆಗಳು ನಡೆದರೆ ತಕ್ಷಣ ಕಣ್ಣಿಗೆ ಬೀಳುತ್ತವೆ.
ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ದೇಶದ ವಿವಿಧ ಭದ್ರತಾ ಸಂಸ್ಥೆಗಳು ಯಾತ್ರೆಯ ಭದ್ರತೆಗಾಗಿ ವ್ಯಾಪಕ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಮಂಗಳವಾರ ಶ್ರೀನಗರದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ನಡೆದಿದ್ದು, ದೇಶದ ಪ್ರಮುಖ ಭದ್ರತಾ ಸಂಸ್ಥೆಗಳ ಉನ್ನತ ಅಧಿಕಾರಿಗಳು ಹಾಜರಿದ್ದರು.
ಸಭೆಯಲ್ಲಿ ಯಾತ್ರಾ ಮಾರ್ಗದ ಭದ್ರತೆ, ಸಂಭವನೀಯ ಭಯೋತ್ಪಾದಕ ಬೆದರಿಕೆಗಳು, ಗುಪ್ತಚರ ಮಾಹಿತಿಯ ಪರಿಶೀಲನೆ ಮತ್ತು ಹೊಸ ಭದ್ರತಾ ಕ್ರಮಗಳ ಕುರಿತು ವಿವರವಾದ ಚರ್ಚೆಗಳು ನಡೆದವು. ಭದ್ರತಾ ಸಂಸ್ಥೆಗಳು ವಿಶೇಷ ಪಡೆಗಳ ನಿಯೋಜನೆ, ತಾಂತ್ರಿಕ ಕಣ್ಗಾವಲು, ಡ್ರೋನ್ ಕಣ್ಗಾವಲು, ಅನುಮಾನಾಸ್ಪದ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ದಿನನಿತ್ಯದ ಶೋಧ ಕಾರ್ಯಾಚರಣೆಗಳಿಗೆ ಯೋಜನೆಯನ್ನು ಸಿದ್ಧಪಡಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಗಾಗಿ 42,000 ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯನ್ನೊಳಗೊಂಡ 580 ತುಕಡಿಗಳ ನಿಯೋಜನೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. 580 ತುಕಡಿಗಳ ಪೈಕಿ 424 ತುಕಡಿಗಳನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ.