Menu

ಆಲಮಟ್ಟಿ ಡ್ಯಾಂಗೆ “ಮಹಾ” ಕ್ಯಾತೆ: ಜಲಶಕ್ತಿ ಸಚಿವರಲ್ಲಿ ಕರ್ನಾಟಕದ ಹಕ್ಕು ಸಮರ್ಥಿಸಿದ ಬಿಜೆಪಿ ಸಂಸದರ ನಿಯೋಗ

ಕೃಷ್ಣಾ ಮೇಲ್ಮಂಡೆ ಯೋಜನೆ 2ನೇ ಹಂತದಲ್ಲಿ ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರ ಅನವಶ್ಯಕ ಕ್ಯಾತೆ ತೆಗೆಯುತ್ತಿರುವುದು ಖಂಡನೀಯ. ಕೃಷ್ಣಾ ನ್ಯಾಯಾಧಿಕರಣದ ಆದೇಶದಂತೆ ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಳ ಮಾಡುವುದು ಕರ್ನಾಟಕದ ಹಕ್ಕು ಎಂದು ರಾಜ್ಯದ ಬಿಜೆಪಿ ಸಂಸದರ ನಿಯೋಗ ಕೇಂದ್ರ ಜಲ ಶಕ್ತಿ ಸಚಿವ ಸಿ.ಆ‌ರ್. ಪಾಟೀಲ ಅವರಿಗೆ ಮನವರಿಕೆ ಮಾಡಿದೆ.

ಕೇಂದ್ರ ಸಚಿವರ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮಹಾರಾಷದ ಸಂಸದರು ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಆಲಮಟ್ಟಿ ಡ್ಯಾಮ್ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರೊಂದಿಗೆ ಬಿಜೆಪಿ ಸಂಸದರ ನಿಯೋಗ ನವ ದೆಹಲಿಯಲ್ಲಿ ಕೇಂದ್ರ ಜಲ ಶಕ್ತಿ ಸಚಿವರಾದ ಸಿ.ಆರ್. ಪಾಟೀಲ್ ಹಾಗೂ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ, ಆಲಮಟ್ಟಿ ಆಣೆಕಟ್ಟೆ ಎತ್ತರ ಹೆಚ್ಚಳ ಮಾಡಲು ಮಹಾರಾಷ್ಟ್ರ ಕ್ಯಾತೆ ತೆಗೆಯುತ್ತಿರುವುದು ಖಂಡನೀಯ ಎಂದು ತಿಳಿಸಿದ್ದೇವೆ ಎಂದರು.

ಕೃಷ್ಣಾ ನ್ಯಾಯಾಧಿಕರಣ 2 ರಲ್ಲಿ ಆಲಮಟ್ಟಿ ಡ್ಯಾಮ್ ಎತ್ತರವನ್ನು 524 ಮೀಟರ್‌ಗೆ ಹೆಚ್ಚಳ ಮಾಡಲು ಒಪ್ಪಿಗೆ ಕೊಟ್ಟಿದೆ. ಇದಕ್ಕೂ ಪೂರ್ವದಲ್ಲಿ ಕೇಂದ್ರ ಹಾಗೂ ಮೂರು ರಾಜ್ಯಗಳ ತಂಡದಿಂದ ಜಂಟಿ ಸಮೀಕ್ಷೆ ಮಾಡಿ, ಹೈಡಾಲಜಿಕಲ್ ಸ್ಟಡಿ ಮಾಡಿ ಡ್ಯಾಮ್‌ನಿಂದ ಪ್ರವಾಹ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ. 2005 ರಲ್ಲಿ ಪ್ರವಾಹ ಆದಾಗ ಕೇಂದ್ರ ಜಲ ಆಯೋಗವೂ ಕೂಡ ಸಾಂಗ್ಲಿ ಮತ್ತು ಕೊಲ್ಲಾಪುರದಲ್ಲಿ ಡ್ಯಾಮ್‌ನಿಂದ ಪ್ರವಾಹ ಆಗುವುದಿಲ್ಲ ಎಂದು ಹೇಳಿದೆ. ಹೀಗಾಗಿ ಮಹಾರಾಷ್ಟ್ರ ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಳ ಮಾಡಲು ಕ್ಯಾತೆ ತೆಗೆದಿರುವುದು ಸರಿಯಲ್ಲ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಹೇಳಿದರು.

ನ್ಯಾಯ ಮಂಡಳಿ ಆದೇಶ ಸುಪ್ರೀಂ ಕೋರ್ಟ್ ಡಿಕ್ರಿ ಇದ್ದ ಹಾಗೆ ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಳ ಮಾಡುವುದು ನಮ್ಮ ಹಕ್ಕು. ನಮ್ಮ ಹಕ್ಕನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇವೆ. ಅವರು ಗೆಜೆಟ್ ನೋಟಿಫಿಕೇಶನ್ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಮೀರಿ ಏನೂ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಆದಷ್ಟು ಬೇಗನೇ ವಿಚಾರಣೆಗೆ ಬರುವಂತೆ ಮಾಡಿ ಗೆಜೆಟ್ ನೋಟಿಫೀಕೇಶನ್ ಹೊರಡಿಸುವಂತೆ ಮಾಡಿಸಲು ತಮ್ಮ ಎಲ್ಲ ಶಕ್ತಿ ಉಪಯೋಗಿಸಬೇಕು ಎಂದು ಹೇಳಿದರು.

ಆಲಮಟ್ಟಿ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಪತಿಕ್ರಿಯಿಸಿದ ಅವರು, ಅಂತಾರಾಜ್ಯ ಜಲ ವಿವಾದ ಕಾಯ್ದೆ ಸಷ್ಟವಾಗಿದೆ. ಸೆಕ್ಸೆನ್ 3 ಪ್ರಕಾರ ದೂರು ಕೊಟ್ಟ ಮೇಲೆ ಕೇಂದ್ರ ಸರ್ಕಾರ ನ್ಯಾಯ ಮಂಡಳಿ ರಚನೆ ಮಾಡಿ, ನ್ಯಾಯ ಮಂಡಳಿ ಎರಡೂ ಕಡೆ ವಿಚಾರಣೆ ನಡೆಸಿ ಆದೇಶ ಹೊರಡಿಸಿದರೆ ಅದು ಸುಪ್ರೀಂ ಕೋರ್ಟ್ ಡಿಕ್ರಿ ಇದ್ದ ಹಾಗೆ. ಉದಾಹರಣೆಗೆ ಕಾವೇರಿ ವಿಚಾರದಲ್ಲಿ ಸುಮಾರು ಹತ್ತು ಹನ್ನೆರಡು ವರ್ಷಗಳ ನಂತರ ಸುಪ್ರೀಂ ಕೋರ್ಟ್ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಹೇಳಿತ್ತು. ಸಂವಿಧಾನದಲ್ಲಿ ಸುಪ್ರೀಂ ಕೋರ್ಟ್‌ಗೆ ಕೆಲವು ಅಧಿಕಾರವಿದೆ. ಅದನ್ನು ಸುಪ್ರೀಂ ಕೋರ್ಟ್ ಬಳಕೆ ಮಾಡುತ್ತದೆ ಎಂದರು.

ನಿಯೋಗದಲ್ಲಿ ಬಿಜೆಪಿ ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ. ಗದ್ದಿಗೌಡರ, ರಮೇಶ ಜಿಗಜಿಣಗಿ ಹಾಗೂ ಕೇಂದ್ರ ಜಲ ಶಕ್ತಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Related Posts

Leave a Reply

Your email address will not be published. Required fields are marked *