Menu

ವಿವಾಹಿತ ಮಗಳಿಗೆ ಅನುಕಂಪ ಆಧಾರದ ನೇಮಕಾತಿ ನಿರಾಕರಿಸಲಾಗದು ಎಂದ ಅಲಹಾಬಾದ್‌ ಹೈಕೋರ್ಟ್‌

ವಿವಾಹಿತ ಮಗಳಿಗೆ ಅನುಕಂಪದ ಆಧಾರದ ನೇಮಕಾತಿಯಲ್ಲಿ ಸರ್ಕಾರದಿಂದ ಸಿಗಬೇಕಾದ ಪ್ರಯೋಜನವನ್ನು ನಿರಾಕರಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಉತ್ತರ ಪ್ರದೇಶದ ದೇವರಿಯಾದ ಚಂದಾ ದೇವಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಮತ್ತು ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಪ್ರಕಟಿಸಿದೆ.

ಅರ್ಜಿದಾರರ ಅರ್ಜಿಯನ್ನು ಮರುಪರಿಶೀಲಿಸಿ ಎಂಟು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯವು ಡಿಯೋರಿಯಾ ಜಿಲ್ಲೆಯ ಮೂಲ ಶಿಕ್ಷಣ ಅಧಿಕಾರಿಗೆ ನಿರ್ದೇಶನ ನೀಡಿದೆ. ಚಂದಾ ದೇವಿಯ ತಂದೆ ಸಂಪೂರ್ಣಾನಂದ ಪಾಂಡೆ ಭಟ್ಪರ್ ರಾಣಿ ತಹಸಿಲ್‌ನ ಬ್ಲಾಕ್ ಬಂಕಟ ವ್ಯಾಪ್ತಿಯ ಗಜ್ಹಡ್ವಾದಲ್ಲಿರುವ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. 2014 ರಲ್ಲಿ ಸೇವೆಯಲ್ಲಿದ್ದಾಗ ನಿಧನರಾದರು, ನಂತರ ಚಂದಾ ದೇವಿ ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ಅರ್ಜಿ ಸಲ್ಲಿಸಿದರು. ಡಿಸೆಂಬರ್ 2016 ರಲ್ಲಿ ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿ ಆಕೆಯ ಅರ್ಜಿಯನ್ನು ತಿರಸ್ಕರಿಸಿದರು, ಆಕೆ ವಿವಾಹಿತೆಯಾದ್ದರಿಂದ ಅರ್ಹರಲ್ಲ ಎಂದು ಹೇಳಿದರು.

ಚಂದಾ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು, 2025 ರಲ್ಲಿ ಹೈಕೋರ್ಟ್‌ನ ಏಕ ಪೀಠವು ಅರ್ಜಿಯನ್ನು ವಜಾಗೊಳಿಸಿತ್ತು. ಚಂದಾ ತನ್ನ ಪತಿ ನಿರುದ್ಯೋಗಿ ಮತ್ತು ತಂದೆಯ ಮೇಲೆ ಅವಲಂಬಿತೆ ಎಂದು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಅದು ಹೇಳಿದೆ. ತಂದೆ 2014 ರಲ್ಲಿ ನಿಧನರಾಗಿ 11 ವರ್ಷ ಆಗಿದ್ದು, ಆಕೆಯ ಹಕ್ಕು ಪರಿಗಣನೆಗೆ ಯೋಗ್ಯವಾಗಿಲ್ಲ ಎಂದು ಏಕ ಸದಸ್ಯ ಪೀಠವು ತಿಳಿಸಿತ್ತು.

ಬಳಿಕ ಚಂದಾ ವಿಶೇಷ ಮೇಲ್ಮನವಿ ಸಲ್ಲಿಸಿದರು. ತನ್ನ ತಂದೆಯ ಮೇಲಿನ ಅವಲಂಬನೆಯ ವಿಷಯವನ್ನು ಪರಿಶೀಲಿಸದೆ ಅವಳು ವಿವಾಹಿತಳೆಂಬ ಕಾರಣಕ್ಕೆ ಹಕ್ಕನ್ನು ನಿರಾಕರಿಸಲಾಗಿದೆ. ಅವಳು ಅವಲಂಬನೆಯನ್ನು ಸಾಬೀತುಪಡಿಸಿಲ್ಲ ಎಂಬ ಏಕ ಪೀಠದ ತಾರ್ಕಿಕತೆ ಸರಿಯಲ್ಲ ಎಂದು ವಿಭಾಗೀಯ ಪೀಠ ತೀರ್ಪು ನೀಡಿತು.

2016 ರಲ್ಲಿ ಚಂದಾ ಅವರ ಅರ್ಜಿ ತಿರಸ್ಕೃತವಾದ ಕೂಡಲೇ ನ್ಯಾಯಾಲಯದ ಮೆಟ್ಟಿಲೇರಿದ್ದರು ಎಂದು ವಿಭಾಗೀಯ ಪೀಠವು ಗಮನಿಸಿತು. ವಿಳಂಬದ ಕಾರಣಕ್ಕೆ ಅವರು ಪ್ರಯೋಜನದಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಹೇಳಿದ ಕೋರ್ಟ್‌, ಆಕೆಯ ಅರ್ಜಿಯನ್ನು ಮರುಪರಿಶೀಲಿಸಿ ಮುಂದಿನ ಎಂಟು ವಾರಗಳಲ್ಲಿ ನಿರ್ಧಾರವನ್ನು ಹೊರಡಿಸುವಂತೆ ಡಿಯೋರಿಯಾ ಶಿಕ್ಷಣ ಅಧಿಕಾರಿಗೆ ಆದೇಶಿಸಿದೆ.

Related Posts

Leave a Reply

Your email address will not be published. Required fields are marked *