Menu

ಆಷಾಢ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ಧತೆ: 1500 ಮಂದಿ ಭದ್ರತೆಗೆ ನಿಯೋಜನೆ

ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷಪೂಜಾ ಕೈಂಕಾರ್ಯಕ್ಕೆ ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರು ಸುಲಲಿತವಾಗಿ ದೇವರ ದರ್ಶನ ಮಾಡಲು ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.  ಈ ಬಾರಿ ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಚಾಮುಂಡಿಬೆಟ್ಟದಲ್ಲಿ ಬುಧವಾರ ಸಿದ್ಧತೆ ಕಾರ್ಯದ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ  ಅವರು, ಜೂ.27, ಜುಲೈ 4, 11, ಹಾಗೂ 18ರ ಆಷಾಢ ಶುಕ್ರವಾರ, ಜು.17ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತೋತ್ಸವ ನಡೆಯಲಿದೆ.

ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ. ಅಲ್ಲದೇ ಈ ದಿನದಂದು ದರ್ಶನ ಪಡೆಯಲಾಗದವರು, ಶನಿವಾರ, ಭಾನುವಾರದಂದು ಹೆಚ್ಚಿನ ಪ್ರಮಾಣದಲ್ಲಿ ಬೆಟ್ಟಕ್ಕೆ ಆಗಮಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಭಕ್ತಾಧಿಗಳ ಅನುಕೂಲತೆ ದೃಷ್ಟಿಯಿಂದ ಸಿದ್ಧತೆಗಳನ್ನು ಸಮರ್ಪಕವಾಗಿ ಮಾಡಲಾಗಿದೆ ಎಂದು ತಿಳಿಸಿದರು.

ಪಾಸ್ ವ್ಯವಸ್ಥೆ ಇಲ್ಲ: ಆಷಾಢ ಶುಕ್ರವಾರದಂದು ತಾಯಿಯ ದರ್ಶನ ಮಾಡಲು ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇರುವುದಿಲ್ಲ. ದರ್ಮ ದರ್ಶನ, 300 ರೂ. ಹಾಗೂ 2000ರೂ. ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಶಿಫಾರಸ್ಸು ಪತ್ರಗಳನ್ನು ಪರಿಗಣಿಸುವುದಿಲ್ಲ. ಶಿಷ್ಟಾಚಾರದ ವ್ಯಾಪ್ತಿಗೆ ಬರುವವರಿಗೆ ಮಾತ್ರ ಪ್ರವೇಶವಿದೆ. ಇವರನ್ನು ಹೊರತು ಪಡಿಸಿ ಶುಕ್ರವಾರ ಶನಿವಾರ, ಭಾನುವಾರದಂದು ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆದರೆ, ಬೆಟ್ಟದಲ್ಲಿ ವಾಸ ಮಾಡುವ ಜನರು ಗುರುತಿನ ಪತ್ರ ತೋರಿಸಿ ಓಡಾಡಬಹುದು ಎಂದರು.

ಬಸ್ ಹತ್ತುವಾಗಲೇ ಟಿಕೆಟ್:  ಲಲಿತ್ ಮಹಲ್ ಪ್ಯಾಲೇಸ್ ಮೈದಾನದಲ್ಲೇ ದರ್ಶನದ ಟಿಕೆಟ್‌ಗಳನ್ನು ನೀಡಲಾಗುತ್ತದೆ. 300 ರೂ, ಹಾಗೂ 2 ಸಾವಿರ ರೂ., ಮೌಲ್ಯದ ಟಿಕೆಟ್ ಪಡೆದವರನ್ನು ಹಾಗೂ ಧರ್ಮ ದರ್ಶನ ಪಡೆಯುವ ಭಕ್ತರನ್ನು  ನಿಲ್ದಾಣದಿಂದಲೇ ಪ್ರತ್ಯೇಕವಾದ ಬಸ್‌ಗಳಲ್ಲಿ ಕರೆ ತರಲಾಗುತ್ತದೆ. ಇದಕ್ಕಾಗಿ ಮೂರು ಪ್ರತ್ಯೇಕ ಸಾಲುಗಳನ್ನು ಮಾಡಲಾಗಿದೆ.

ಬೆಟ್ಟದ ಮೇಲೆ ಬರುವ ಬಸ್ಸುಗಳು ಧರ್ಮ ದರ್ಶನ ಪಡೆಯುವ ಭಕ್ತರನ್ನು ಚಾಮುಂಡಿ ಬೆಟ್ಟದ ಪ್ರವೇಶ ದ್ವಾರದಲ್ಲಿ ಇಳಿಸುತ್ತವೆ. ಅಲ್ಲಿಂದಲ್ಲೇ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು. ಭಕ್ತರು ಸರತಿ ಸಾಲಿನಲ್ಲಿ ಹೋಗಬೇಕು. ಇನ್ನೂ 300 ರೂಪಾಯಿ ಟಿಕೆಟ್ ಪಡೆದುಕೊಂಡಿರುವವರು ಮಲ್ಟಿಲೆವಲ್ ಪಾಕಿರ್ಂಗ್ ಬಳಿ ಇರುವ ಬಸ್ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಸರತಿ ಸಾಲಿನಲ್ಲಿ ಹೋಗಬೇಕು. 2000 ರೂ. ಟಿಕೆಟ್ ಪಡೆದುಕೊಂಡಿರುವವರು ಮಹಿಷಾಸುರ ಪ್ರತಿಮೆಯ ಮುಂಭಾಗದಿಂದ ದೇವಸ್ಥಾನ ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಲಲಿತ್ ಮಹಲ್ ಪ್ಯಾಲೇಸ್ ಬಳಿ ಬಸ್ ಹತ್ತುವಾಗಲೇ ತಮ್ಮ ಪಾದರಕ್ಷೆಗಳನ್ನು ಬಿಡಬೇಕು. ಇದಕ್ಕಾಗಿ ಕೌಂಟರ್ ತೆರೆಯಲಾಗಿದೆ ಎಂದು ಹೇಳಿದರು.

ಮೆಟ್ಟಿಲು ಹತ್ತಿದವರಿಗೆ ನೇರ ದರ್ಶನ: ಸಾವಿರ ಮೆಟ್ಟಿಲು ಹತ್ತಿಕೊಂಡು ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ನೇರ ದರ್ಶನದ ಅವಕಾಶವನ್ನು ಕಲ್ಪಿಸಲಾಗುತ್ತದೆ. ಮೆಟ್ಟಿಲ ಬಳಿಯಿಂದಲೇ ಬ್ಯಾರಿಕೇಡ್ ಅಳವಡಿಸಿ, ಪ್ರತ್ಯೇಕ ಸರತಿ ಸಾಲನ್ನು ಮಾಡಲಾಗಿದೆ. ಇಲ್ಲಿಂದ ಭಕ್ತರು ದೇವಾಲಯವನ್ನು ಪ್ರವೇಶ ಮಾಡಿ, ದೇವಿಯ ದರ್ಶನ ಮಾಡಬಹುದು ಎಂದು ತಿಳಿಸಿದರು.

ಪ್ರಸಾದ ವಿತರಣೆ ಜಾಗ ಬದಲು:

ಪ್ರತಿ ವರ್ಷ ಮಲ್ಟಿ ಲೆವಲ್ ಪಾಕಿರ್ಂಗ್ ಜಾಗದಲ್ಲಿ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ಕಾರ್ಯ ನಡೆಯುತ್ತಿತ್ತು. ಈ ಬಾರಿ ಅರಣ್ಯ ಮಾಹಿತಿ ಭವನದ ಆವರಣವನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮೊದಲ ಶುಕ್ರವಾರ ಪ್ರಾಧಿಕಾರದ ವತಿಯಿಂದಲೇ ಅನ್ನ ಸಂತರ್ಪಣೆ ಕಾರ್ಯ ನಡೆಯುತ್ತಿದೆ. ಮುಂದಿನ ಶುಕ್ರವಾರಗಳಲ್ಲಿ  ಸಂಘ-ಸಂಸ್ಥೆಗಳು, ಸೇವಾರ್ಥದಾರರನ್ನು ಒಳಗೊಂಡಿಸಿಕೊಂಡು ಮಾಡುವ ಆಲೋಚನೆ ಇದೆ ಎಂದರು.

1500 ಮಂದಿ ಭದ್ರತೆಗೆ: ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಆಷಾಢ ಶುಕ್ರವಾರ, ಶನಿವಾರ, ಭಾನುವಾರ ಬೆಟ್ಟಕ್ಕೆ ಖಾಸಗಿ ವಾಹನ ಪ್ರವೇಶ ನಿಷೇಧಿಸಲಾಗಿದೆ. ಗುರುವಾರ ರಾತ್ರಿ 10 ಗಂಟೆಯಿಂದ ಭಾನುವಾರ ರಾತ್ರಿ 11 ಗಂಟೆವರೆಗೆ ಖಾಸಗಿ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಲಲಿತ ಮಹಲ್ ಮೈದಾನದಲ್ಲಿ ಧರ್ಮ ದರ್ಶನ, 300, 2 ಸಾವಿರ ರೂ ಟಿಕೆಟ್‌ಗಳಿಗೆ ಪ್ರತ್ಯೇಕ ಪಾರ್ಕಿಕ್ ವ್ಯವಸ್ಥೆ ಮಾಡಲಾಗಿದೆ. ಸಿಸಿ ಟಿವಿ, ಅಗತ್ಯ ಲೈಟಿಂಗ್ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ, ನೂಕುನುಗ್ಗಲು ಆಗದಂತೆ ತಡೆಯಲು 4 ಡಿಸಿಪಿ, ಎಎಸ್‌ಪಿ, 12 ಎಸಿಪಿ, 32 ಪಿಐ, 65 ಪಿಎಸ್‌ಐ, 1071 ಹೆಚ್‌ಸಿ, ಪಿಸಿ, 6 ಕೆಎಸ್‌ಆರ್‌ಪಿ, 12 ಸಿಎಆರ್, 4 ಕಮಾಂಡ್ ವಾಹನ, ಎಚ್‌ಜಿ 300 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ  ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಯುಕೇಶ್ ಕುಮಾರ್, ಪ್ರಾಧಿಕಾರದ ಕಾರ್ಯದರ್ಶಿ ರೂಪ, ಡಿಸಿಪಿಗಳಾದ ಮುತ್ತುರಾಜ್, ಸುಂದರ್ ರಾಜ್ ಹಾಜರಿದ್ದರು.

Related Posts

Leave a Reply

Your email address will not be published. Required fields are marked *