Thursday, September 18, 2025
Menu

ರಾಹುಲ್ ಗಾಂಧಿ ಆರೋಪಗಳೆಲ್ಲವೂ ಸತ್ಯ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಆಳಂದ ಕ್ಷೇತ್ರದ ಮತ ಅಕ್ರಮದ ಬಗ್ಗೆ ಸಿಐಡಿ ತನಿಖೆಗೆ ಚುನಾವಣಾ ಆಯೋಗ ಸಹಕಾರ ನೀಡದಿರುವುದನ್ನು ನೋಡಿದರೆ, ಅವರೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆಂಬ ಅನುಮಾನ ಸಹಜವಾಗಿ ಮೂಡುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಗುರುವಾರ ಮಾತನಾಡಿದ ಅವರು, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿರುವ ಬಗ್ಗೆ ನವದೆಹಲಿಯಲ್ಲಿ ರಾಹುಲ್ ಗಾಂಧಿ ಅವರು ಮಾಧ್ಯಮಗೋಷ್ಠಿ ನಡೆಸಿರುವ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಅವರು ಈ ಬಗ್ಗೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಪಡೆದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಕೇವಲ ಆಳಂದ ವಿಧಾನಸಭಾ ಕ್ಷೇತ್ರ ಮಾತ್ರವಲ್ಲ, ಬೇರೆ ಕ್ಷೇತ್ರಗಳಲ್ಲೂ ಈ ರೀತಿ ಅಕ್ರಮಗಳು ನಡೆದಿವೆ” ಎಂದರು.

“ಸುಮಾರು 6 ಸಾವಿರ ಮತಗಳನ್ನು ತೆಗೆದು ಹಾಕಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹಾಗೂ ಆಳಂದ ಶಾಸಕರು ದೂರು ನೀಡಿದ್ದರು. ಈ ಕುರಿತು ಪ್ರಕರಣವೂ ದಾಖಲಾಯಿತು. ಈ ಮಧ್ಯೆ ಚಿಲುಮೆ ಸಂಸ್ಥೆ ಅಕ್ರಮದ ವಿಚಾರವಾಗಿ ನಾವು ಹೋರಾಟ ಮಾಡಿ ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದೆವು. ಆಳಂದ ಕ್ಷೇತ್ರದ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆರಂಭಿಸಿ ಚುನಾವಣಾ ಆಯೋಗದಿಂದ ಮಾಹಿತಿ ಕೇಳಿತ್ತು. ಆದರೆ ಆಯೋಗವು ತನಿಖೆಗೆ ಸಹಕಾರ ನೀಡಲಿಲ್ಲ” ಎಂದು ತಿಳಿಸಿದರು.

“ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತಹ ಪರಿಶಿಷ್ಟರು, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲ ಜನ ಸಾಮಾನ್ಯರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಗಡಿ ಭಾಗದಲ್ಲಿರುವ ಬೇರೆ ರಾಜ್ಯದವರ ಹೆಸರನ್ನು ಸೇರಿಸಲಾಗಿತ್ತು. ಒಟ್ಟಾರೆ ಇದೆಲ್ಲವನ್ನೂ ಪೂರ್ವ ನಿಯೋಜಿತವಾಗಿ ಮಾಡಲಾಗಿತ್ತು. ಹೀಗಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಅವರು ಮಾಡಿರುವ ಆರೋಪಗಳೆಲ್ಲವೂ ನಿಜ” ಎಂದು ತಿಳಿಸಿದರು.

ಮತದಾನದ ಹಕ್ಕು ಕಾಯುವುದು ಆಯೋಗದ ಕರ್ತವ್ಯ, ಕಸಿಯುವುದಲ್ಲ

ಕೇಂದ್ರ ಸರ್ಕಾರದ ಜೊತೆ ಕೇಂದ್ರ ಚುನಾವಣಾ ಆಯೋಗ ಷಾಮೀಲಾಗಿ ಈ ಷಡ್ಯಂತ್ರ ರೂಪಿಸುತ್ತಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪದ ಬಗ್ಗೆ ಕೇಳಿದಾಗ, “ಅವರು ಮಾಡಿರುವ ಆರೋಪ ಸತ್ಯ ಎಂದು ನಾನು ಹೇಳುತ್ತಿದ್ದೇನೆ. ಯಾವುದೇ ವ್ಯಕ್ತಿ ಮತಪಟ್ಟಿಯಿಂದ ಹೆಸರು ತೆಗೆಸಲು ಅರ್ಜಿ ನೀಡಿದರೆ ಆತ ತನ್ನ ಮೊಬೈಲ್ ಸಂಖ್ಯೆ ನೀಡಬೇಕು ಹಾಗೂ ಆ ಸಂಖ್ಯೆಗೆ ಓಟಿಪಿ ಹೋಗಬೇಕಲ್ಲವೇ? ಈ ಎಲ್ಲವನ್ನೂ ಪರಿಶೀಲನೆ ಮಾಡಿದ ಬಳಿಕ ಮತಪಟ್ಟಿಯಲ್ಲಿ ಹೆಸರು ತೆಗೆಯಬೇಕು. ಈ ವಿಚಾರವಾಗಿಯೇ ರಾಹುಲ್ ಗಾಂಧಿ ಅವರು ದೇಶಾದ್ಯಂತ ಹೋರಾಟ ಮಾಡುತ್ತಿದ್ದಾರೆ. ನಮ್ಮ ಮತ, ನಮ್ಮ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಕಾಯುವುದು ಚುನಾವಣಾ ಆಯೋಗದ ಕರ್ತವ್ಯ, ಕಸಿಯುವುದಲ್ಲ. ಪ್ರತಿಯೊಬ್ಬರ ಹಕ್ಕು ರಕ್ಷಣೆ ಮಾಡಿ, ರಾಜಕೀಯ ಪಕ್ಷಗಳ ಮೇಲೆ ಅವಲಂಬಿತರಾಗಬೇಡಿ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತವೆಯೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಆಯೋಗ ನ್ಯಾಯಬದ್ಧವಾಗಿ ಮತದಾನದ ಹಕ್ಕು ಕಾಪಾಡಬೇಕು” ಎಂದು ತಿಳಿಸಿದರು.

ಆಯೋಗ ಮಾಹಿತಿ ನೀಡದಿದ್ದಾಗ ನ್ಯಾಯಾಲಯದ ಮೊರೆ ಏಕೆ ಹೋಗಲಿಲ್ಲ ಎಂದು ಕೇಳಿದಾಗ, “ಸರ್ಕಾರ ಏಕೆ ನ್ಯಾಯಾಲಯದ ಮೊರೆ ಹೋಗಬೇಕು? ಮತದಾನದ ಹಕ್ಕು ತಪ್ಪಿರುವ ಜನಸಾಮಾನ್ಯರು ಹೋಗುತ್ತಾರೆ” ಎಂದರು.

ರಾಹುಲ್ ಗಾಂಧಿ ಅವರ ಆರೋಪ ಸುಳ್ಳು ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹಾಗೂ ಕೇಂದ್ರ ಚುನಾವಣಾ ಆಯೋಗ ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ಆಯೋಗಕ್ಕೆ ಮಾಹಿತಿ ಕೇಳಿ ಬರೆದಿರುವ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು?” ಎಂದು ಪ್ರಶ್ನಿಸಿದರು.

ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕೇಳಿದಾಗ, “ಮೊದಲು ಅವರು ತನಿಖೆಗೆ ಸಹಕಾರ ನೀಡಿ ಅಗತ್ಯ ಮಾಹಿತಿ ಒದಗಿಸಲಿ. ತನಿಖೆ ಬಳಿಕ ತಪ್ಪು ಯಾರು ಮಾಡಿದ್ದಾರೆ ಎಂಬುದು ಬಹಿರಂಗವಾಗಲಿ” ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತಪತ್ರ ಬಳಕೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿಲ್ಲ ಎಂದು ಕೇಳಿದಾಗ, “ಕಾನೂನಿನಲ್ಲೇ ಅವಕಾಶ ಇರುವಾಗ ಈ ವಿಚಾರವಾಗಿ ಮತ್ತೆ ಮತ್ತೆ ಚರ್ಚೆ ಮಾಡುವ ಅಗತ್ಯವೇನಿದೆ?” ಎಂದು ಕೇಳಿದರು.

ಕಾನೂನು ಬಂದರೆ ಮಾಡುತ್ತೇವೆ ಎಂಬ ಆಯೋಗದ ಹೇಳಿಕೆ ಬಗ್ಗೆ ಕೇಳಿದಾಗ, “ನಮಗೆ ಅವರು ಅಧಿಕೃತವಾಗಿ ಈ ವಿಚಾರವನ್ನು ಹೇಳಿಲ್ಲ. ಮೊದಲು ವಾರ್ಡ್ ಮರುವಿಂಗಡಣೆ ನಂತರ ಆಯೋಗಕ್ಕೆ ಸೂಚನೆ ನೀಡಲಾಗುವುದು” ಎಂದು ತಿಳಿಸಿದರು.

ಮಾಲೂರು ಕ್ಷೇತ್ರದ ಮರುಎಣಿಕೆಗೆ ಕೋರ್ಟ್ ಸೂಚನೆ ನೀಡುರುವುದು ಕಾಂಗ್ರೆಸ್ ಪಕ್ಷದ ಮತಗಳ್ಳತನಕ್ಕೆ ಸಾಕ್ಷಿ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಮಾಲೂರು ಪ್ರಕರಣವೇ ಬೇರೆ. ಮತಗಳ ಮರುಎಣಿಕೆಗೂ ಮುನ್ನವೇ ಶಾಸಕರನ್ನು ಅನರ್ಹ ಮಾಡಿರುವುದು ಆಘಾತಕಾರಿ ಬೆಳವಣಿಗೆ. ಮತಗಳ ಮರುಎಣಿಕೆ ನಂತರ ಬೇಕಾದರೆ ತೀರ್ಮಾನ ಮಾಡಬಹುದಿತ್ತು” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *