ನಿಸ್ವಾರ್ಥದಿಂದ ಮುಂಜಾನೆ ಎಲ್ಲರನ್ನೂ ಎಬ್ಬಿಸಿ ಅನ್ನ ಅರಸುವ ಕಾಗೆ, ಸತ್ತಾಗ ಇಡುವ ಪಿಂಡ ತಿನ್ನಲು ಬಂದಾಗ ಅದರ ತಲೆಯಲ್ಲಿ ಸುಳಿಯುವುದಿಲ್ಲ ಸತ್ತವ ಯಾವ ಜಾತಿಯವನಿರಬಹುದು ಎಂಬ ಪ್ರಶ್ನೆ. ಮಂದಿರ, ಮಸೀದಿ, ಚರ್ಚ್‌ನ ತುತ್ತ ತುದಿಯಲ್ಲಿ ಕೂರುವ ಪಾರಿವಾಳಕ್ಕೆ ಯಾವ ವ್ಯತ್ಯಾಸವೂ ಕಂಡು ಬರುವುದಿಲ್ಲ. ಕಾರಣ, ಧರ್ಮಗಳ ಹಂಗಿಗೆ ಅದೆಂದಿಗೂ ಒಳಗಾಗಿಲ್ಲ. ಎರಡು ದೇಶಗಳ ನಡುವೆ ಎಳೆದ ಗಡಿರೇಖೆಯ ಮೇಲೆ ಹಾರಾಡುವ ಹದ್ದು ಎಂದಾದರೂ ಯೋಚನೆ ಮಾಡಿದ್ದಿದೆಯೇ, ಕೇಳಿ ಬರುತ್ತಿರುವ ಮದ್ದು ಗುಂಡುಗಳ ಸದ್ದು ಯಾವ ದೇಶದ್ದಿರಬಹುದೆಂದು?…
ಮುಂದಾಡುವ ಮಂದಿಯ ಮಾತು
ಮುಳ್ಳಾದರೆ ಎತ್ತಿ ಎಸೆ ದೂರ
ಸುಳ್ಳಾದರೆ ಸುಟ್ಟು ಬಿಡು
ಹೂವಂತಿದ್ದರೆ ಸಹಿಸಿಕೊ ನೋವಾದರೂ…
ಬುದ್ಧ -ಬಸವ -ಗಾಂಧಿಯನ್ನೇ ಬೆಂಬಿಡದೆ ಬೆನ್ನಿಗಿರಿದ ಮಾತುಗಳು ಜನಸಾಮಾನ್ಯರಾದ ನಮ್ಮನ್ನು ಸುಮ್ಮನೆ ಬಿಟ್ಟಾವೆಯೇ? ಅದ್ಯಾವುದಕ್ಕೂ ತಲೆಗೊಡದೆ, ಮನಸ್ಸಿಗೆ ಹಚ್ಚಿಕೊಳ್ಳದೆ, ದಿವ್ಯ ನಿರ್ಲಕ್ಷ್ಯ ವಹಿಸಿ ಮೌನವಾಗಿ ನುಂಗಿಕೊಂಡು ನಡಿಗೆ ನಿಲ್ಲಿಸದೆ ಸಾಗುತ್ತಿರಬೇಕು ಎಂಬರ್ಥದ ಈ ಸಾಲುಗಳು ಮಹಾಂತೇಶ್ ಬಿ. ನಿಟ್ಟೂರು ಅವರದ್ದು.
ಅಂತರಾಳದ ರಾಳ
ಬೆಳಿಗ್ಗೆ ಬೇಗ ಎದ್ದು, ಎಲ್ಲರನ್ನೂ ಎಬ್ಬಿಸಿ
ಬೀದಿಯಿಂದ ಬೀದಿಗೆ ಅಲೆಯುವ ಕಾಗೆ
ಯಾರಾದರೂ ಸತ್ತಾಗ ಇಡುವ ಪಿಂಡ ತಿನ್ನುವಾಗ
ಅದಕ್ಕೆ ಕಾಣಿಸುವುದಿಲ್ಲ; ಸತ್ತವ ಯಾವ ಜಾತಿಯೆಂದು…
ಮಂದಿರ, ಮಸೀದಿ, ಚರ್ಚ್ ಮೇಲೆ
ಕುಳಿತ ಪಾರಿವಾಳಕ್ಕೆ ವ್ಯತ್ಯಾಸವೇನೂ
ಅನಿಸಿಲ್ಲದ ಕಾರಣ ಅದು ನಿರ್ಭೀತ!
ನಮ್ಮಷ್ಟಕ್ಕೆ ನಾವೇ ಎಳೆದಿರುವ
ಗಡಿರೇಖೆಗುಂಟ ಹಾರಾಡುವ
ಹದ್ದು ಅರಿಯದು ಇದು ಯಾವ ದೇಶದ
ಮದ್ದು ಗುಂಡಿನ ಸದ್ದು ಎಂದು…
ವಸಂತ ಕಾಲದಲ್ಲಿ ಸೊಂಪಾಗಿ
ಮಾಮರದ ಚಿಗುರು ತಿಂದು
ಇಂಪಾಗಿ ಹಾಡುವ ಕೋಗಿಲೆಗೆ
ಲೆಕ್ಕವಿಲ್ಲ ಇದು ಬಡವರ ಮರವೋ,
ಶ್ರೀಮಂತರ ಮರವೋ ಎಂದು…
ಯಾರನ್ನೂ ಅನುಕರಿಸುವುದಿಲ್ಲ,
ಕೆರಳಿಸಿ ಕೆಂಡವಾಗಿಸುವುದಿಲ್ಲ;
ಅಂಬರದ ಪರಿಶುದ್ಧ ಹಾಳೆಯಲ್ಲಿ
ದೇವರು ರುಜು ಮಾಡಿದ ಬೆಳ್ಳಕ್ಕಿ ಸಾಲು…
ಗೂಡು ಕಟ್ಟುವಾಗ ನೋಡಲಿಲ್ಲ ಗುಬ್ಬಚ್ಚಿ;
ಸ್ಪರ್ಶಾಸ್ಪೃಶ್ಯತೆಯ ಅಂತರದ ಅಂತರಾಳದ
ರಾಳವನ್ನು…!
ಮಹಾಂತೇಶ್ ಬಿ. ನಿಟ್ಟೂರು ಪರಿಚಯ: ದಾವಣಗೆರೆ ಜಿಲ್ಲೆಯ ಹರಿಹರದ ನಿಟ್ಟೂರಿನವರಾದ ಇವರು ಚನ್ನಗಿರಿ ತಾಲೂಕಿನ ತ್ಯಾವಣಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಕಥೆ, ಲೇಖನ ಬರವಣಿಗೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿರುವ ಮಹಾಂತೇಶ್, ಕಾವ್ಯ ಧಾರೆ ಮಕ್ಕಳ ಕವಿತೆ, ನಂಟು ಭಾವಗೀತೆ, ಡೊಂಕು ಲೋಕದ ಕೊಂಕುತಿಮ್ಮ ಚುಟುಕು, ಹಾದಿಯ ಹಂಗು ಮುಕ್ತಕ, ಒಡಲು ಬೆಂಕಿಯ ಗದ್ದೆ, ಬೆಳಕಿನ ಸಮಾಧಿ, ಹವಳದ ದಿಂಡು ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತಾಲೂಕು, ಜಿಲ್ಲಾ, ರಾಜ್ಯಮಟ್ಟದ ವಿಚಾರ ಸಂಕಿರಣ, ಶೈಕ್ಷಣಿಕ ಸಮ್ಮೇಳನ ಮತ್ತು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಕವಿತೆಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಂದೆಯ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿದ್ದಾರೆ. ಇವರ ಸಾಹಿತ್ಯಿಕ ಕೃಷಿಗೆ ಶತ ಶೃಂಗ, ಸ್ವರ್ಣ ಕನ್ನಡಿಗ, ಶ್ರೀಗುರು ತಿಲಕ, ಕರ್ನಾಟಕ ಜ್ಯೋತಿ, ಕಾಯಕ ಯೋಗಿ, ೨೦೨೨ರ ಶ್ರೇಷ್ಠ ಬರಹಗಾರ ಪ್ರಶಸ್ತಿಗಳು ಸಂದಿವೆ.