ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಅಕ್ಷಯ್ ಮೃತಪಟ್ಟಿದ್ದಾರೆ.
ಜೂನ್ 15ರಂದು ಬಸವನಗುಡಿಯಬ್ರಹ್ಮ ಚೈತನ್ಯ ಮಂದಿರದ ಬಳಿ ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ 29 ವರ್ಷದ ಅಕ್ಷಯ್‌ಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆದು 60 ತಾಸು ಕಳೆದ ಬಳಿಕವೂ ಮೆದುಳು ಸ್ಪಂದಿಸದೇ ಇದ್ದಿದ್ದರಿಂದ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು
ಅಕ್ಷಯ್ ಬದುಕುಳಿಯುವ ಸಾಧ್ಯತೆ ಕಡಿಮೆಯಿತ್ತು. ಜೀವ ಉಳಿಯಲೆಂದು ಕುಟುಂಬದವರು ಮೃತುಂಜಯ ಹೋಮ ನೆರವೇರಿಸಿದ್ದರು. ಆದರೆ ಇಂದು ಹೃದಯ ಸ್ತಂಭನಗೊಂಡು ಅಕ್ಷಯ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಿನ್ನೆಯಷ್ಟೇ ಡಯಾಲಿಸಿಸ್‌ಗೆ ಒಳಗಾಗಿದ್ದ ಅಕ್ಷಯ್ ತಂದೆ ಇಂದು ಆಸ್ಪತ್ರೆಗೆ ವ್ಹೀಲ್ ಚೇರ್‌ನಲ್ಲೇ ಬಂದು ಮಗನನ್ನು ನೋಡಿದ್ದರು.
ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಅಕ್ಷಯ್ ಬಲಿಯಾದ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆ ಬಳಿ ಭದ್ರತೆಗಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಶ್ರೀನಿವಾಸನಗರದ ನಿವಾಸಿ ಅಕ್ಷಯ್ ರಾಜಾಜಿನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮರದ ಕೊಂಬೆ ಬಿದ್ದು ತಲೆಯ ಮಧ್ಯ ಭಾಗಕ್ಕೆ ತೀವ್ರ ಗಾಯವಾಗಿ ಮೂಗು, ಬಾಯಿ, ಕಿವಿಯಲ್ಲಿ ರಕ್ತಸ್ರಾವವಾಗಿತ್ತು.