ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹತ್ಯೆ ಸಂಭವಿಸಿದೆ. ಎಕೆಎಂಎಸ್ ಬಸ್ ಮಾಲಕ ಸೈಪು ಅಲಿಯಾಸ್ ಸೈಫುದ್ದೀನ್ ಅವರನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಕೊಲೆಗೈದಿದೆ.
ವರದಿಗಳ ಪ್ರಕಾರ, ಕೊಡವೂರು ಸಮೀಪದ ಸಾಲ್ಮರ ಪ್ರದೇಶದಲ್ಲಿರುವ ಸೈಫ್ ಅವರ ಮನೆಗೆ ದುಷ್ಕರ್ಮಿಗಳು ನುಗ್ಗಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ.
ಈ ಘಟನೆಯು ಬೆಳಿಗ್ಗೆ 10 ಗಂಟೆಗೆ ನಡೆದಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಡಿವೈಎಸ್ಪಿ ಪ್ರಭು ಡಿಟಿ ಮತ್ತು ಇತರ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸೈಫುದ್ದೀನ್ ಮೇಲೆ ಈಗಾಗಲೇ 18 ಪ್ರಕರಣಗಳು ದಾಖಲೆಯಾಗಿದ್ದು, ಎರಡು ಕೊಲೆ ಪ್ರಕರಣಗಳಲ್ಲಿ ನೇರ ಆರೋಪಿಯಾಗಿದ್ದಾನೆ. ಸೈಫ್ ಉಡುಪಿ ಮತ್ತು ಹಿರಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದಾನೆ ಎಂದು ತಿಳಿದು ಬಂದಿದೆ.
“ಕೊಡವೂರು ಸಾಲ್ಮರದಲ್ಲಿ ಸೈಫ್ ಮೇಲೆ ದಾಳಿ ಸಂಭವಿಸಿದೆ. ಮೂವರು ದುಷ್ಕರ್ಮಿಗಳು ಏಕಕಾಲದಲ್ಲಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಆರೋಪಿಗಳು ಸೈಫ್ ಮಾಲೀಕತ್ವದ ಎಕೆಎಂಎಸ್ ಖಾಸಗಿ ಬಸ್ ಸಂಸ್ಥೆಯ ಉದ್ಯೋಗಿಗಳಾಗಿದ್ದಾರೆ” ಉಡುಪಿ ಮಲ್ಪೆಯಲ್ಲಿ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹೇಳಿಕೆ ನೀಡಿದ್ದಾರೆ.
ಚಾಕು ಮತ್ತು ತಲವಾರಿನಿಂದ ದಾಳಿ ನಡೆದಿದ್ದು, ದೇಹದ ಹಲವು ಭಾಗಗಳಲ್ಲಿ ಗಾಯಗಳಿವೆ. ಮಲ್ಪೆಯ ಮನೆಯಲ್ಲಿ ಸೈಫುದ್ದೀನ್ ಒಬ್ಬರೇ ಇದ್ದಾಗ ಈ ದಾಳಿ ನಡೆದಿದೆ. ಕೊಲೆಗಾಗಿ ನಿಖರ ಕಾರಣ ಮತ್ತು ಆರೋಪಿಗಳ ಹೆಚ್ಚಿನ ಮಾಹಿತಿಯನ್ನು ತನಿಖೆಯ ನಂತರ ಬಹಿರಂಗಪಡಿಸಲಾಗುವುದು. ಸೊಕೋ ತಂಡ ಕೂಡ ಸ್ಥಳಕ್ಕೆ ಶೀಘ್ರದಲ್ಲಿಯೇ ತೆರಳಲಿದೆ. ವಾಸವಿರುವ ಮನೆ ಮಣಿಪಾಲ ಭಾಗದಲ್ಲಿದ್ದು, ಹಿಂದಿನ ಕೊಲೆಗಳಿಗೆ ಪ್ರತಿಕಾರವೇ ಇದೆಯೇ ಎಂಬುದನ್ನು ತನಿಖೆ ನಿರ್ಧರಿಸಲಿದೆ ಎಂದು ಎಸ್.ಪಿ. ಹರಿರಾಂ ತಿಳಿಸಿದ್ದಾರೆ.