ಅಜಕೋಟಿ ಕಲ್ಪವರುಷದವರೆಲ್ಲರೂ ಹಿರಿಯರೇ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ? ನಡು ಮುರಿದು ಗುಡುಗೂರಿ ತಲೆ ನಡುಗಿ ನೆರೆತೆರೆ ಹೆಚ್ಚಿ; ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ ಅಜ್ಞಾನಿಗಳೆ ಲ್ಲರೂ ಹಿರಿಯರೇ? ಅನುವನರಿದು ಘನವ ಬೆರೆಸಿ ಹಿರಿದು ಕಿರಿದೆಂಬ ಭೇದವ ಮರೆದು ಕೂಡಲ ಚೆನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿಯತನ ನಮ್ಮ ಮಹಾದೇವಿಯಕ್ಕಂಗಾಯಿತ್ತು.
ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ಕಾಲದ ಸಮಕಾಲೀನರು, ಜಾಗತಿಕ ಮಹಿಳೆಯರಿಗೆ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಸಮಾನತೆ ಸಾರಿದ ಧೀಮಂತ ಮಹಾ ಶಿವಶರಣೆ, ಕನ್ನಡ ಸಾಹಿತ್ಯ ಲೋಕದ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿ ಅಕ್ಕಮಹಾದೇವಿ. ಅಕ್ಕ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ ಜನಿಸಿದರು. ಸಾಕ್ಷಾತ್ ಸೃಷ್ಟಿಕರ್ತನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕನ ಹಾದಿ ಬಲು ರೋಚಕ.
ಧಾರ್ಮಿಕ ಲೋಕದತ್ತ ಪಯಣಿಸಿದ ಅಕ್ಕ ಶ್ರೇಷ್ಠ ಚಿಂತಕಿಯಾಗಿ ರೂಪುಗೊಂಡರು. ಅನೇಕ ಸಂತರೊಂದಿಗೆ ಚಿಂತನ-ಮಂಥನಗಳು ನಡೆಸಿ ಆಧ್ಯಾತ್ಮಿಕ ಶ್ರೇಷ್ಠ ಸಂತರಾದರು. ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನ ಪಟ್ಟರು. ಅಂದು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಲೋಕದ ಉತ್ತುಂಗ ಶಿಖರದ ಕೀರ್ತಿ ಪತಾಕೆಯಲ್ಲಿ ಕಂಗೊಳಿಸುತ್ತಿದ್ದ ಅನುಭವ ಮಂಟಪದ ವಿಚಾರಧಾರೆಗಳನ್ನು ಅರಿತು ಅನುಭವ ಮಂಟಪಕ್ಕೆ ತೆರಳುವ ಸಂಕಲ್ಪ ವನ್ನು ಮಾಡಿ ಲೋಕಸಂಚಾರಿಯಾಗಿ ಕಲ್ಯಾಣದ ಅನುಭವ ಮಂಟಪದ ಕಡೆ ಹೆಜ್ಜೆ ಹಾಕಿದರು ಅಕ್ಕ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇಂತಹ ಸಮಯದಲ್ಲಿ ಸಾಮಾಜಿಕ ಮತ್ತು ತಾತ್ವಿಕ ಪ್ರಶ್ನೆಗಳನ್ನು ಅಲ್ಲಮ ಪ್ರಭುಗಳು ಅನುಭವ ಮಂಟಪದಲ್ಲಿ ಅಕ್ಕನಿಗೆ ಕೇಳಿದಾಗ, ಅಷ್ಟೇ ತಾಳ್ಮೆ, ಸಹನೆ, ನಮ್ರತೆ ಮತ್ತು ವಿನಯದ ವೈಚಾರಿಕತೆಯ ಆಧ್ಯಾತ್ಮಿಕ ಪರಿಧಿಯೊಳಗೆ ಉತ್ತರಿಸುವ ದಿಟ್ಟತನ ತೋರಿದರು. ಶಿವಶರಣರು ಅಕ್ಕನಲ್ಲಿ ಸನ್ಮಾರ್ಗದ ನೈಜತೆ ಕಂಡರು. ಅಂದು ಭಾರತದಲ್ಲಿದ್ದ ಕೆಲವೊಂದು ಸಂಪ್ರದಾಯ ಡಾಂಬಿಕ, ಅರ್ಥವಿಲ್ಲದ ಆಚರಣೆ ಗಳನ್ನು ಖಂಡಿಸಿ, ಪರ್ಯಾಯವಾಗಿ ಜನಸಾಮಾನ್ಯರ ಅಕ್ಕರೆಯ ಬಸವ ತತ್ವವನ್ನು ಜನಮನಕ್ಕೆ ಮುಟ್ಟಿಸುವ ಕಾಯಕ ಮಾಡಿದರು. ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ ಮಹಾದೇವಿ ಯಕ್ಕನ ರಗಳೆ ಮತ್ತು ಸ್ವತಃ ಅಕ್ಕಮಹಾದೇವಿ ರಚಿಸಿರುವ ವಚನಗಳು ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.
ಅಕ್ಕನ ಘನ ವ್ಯಕ್ತಿತ್ವದ ಕುರಿತು ಚಿನ್ಮಯಿಜ್ಞಾನಿ ಚೆನ್ನಬಸವಣ್ಣನವರ ವಚನ ಹೀಗಿದೆ. ಅಜಕೋಟಿ ಕಲ್ಪವರುಷದವ ರೆಲ್ಲರೂ ಹಿರಿಯರೇ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ? ನಡು ಮುರಿದು ಗುಡು ಗೂರಿ ತಲೆ ನಡುಗಿ ನೆರೆತೆರೆ ಹೆಚ್ಚಿ; ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ ಅಜ್ಞಾನಿಗಳೆಲ್ಲರೂ ಹಿರಿಯರೇ? ಅನು ವನರಿದು ಘನವ ಬೆರೆಸಿ ಹಿರಿದು ಕಿರಿದೆಂಬ ಭೇದವ ಮರೆದು ಕೂಡಲ ಚೆನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿಯತನ ನಮ್ಮ ಮಹಾದೇವಿಯಕ್ಕಂಗಾಯಿತ್ತು.
ಈ ವಚನಗಳಲ್ಲಿ ಸಾಹಿತ್ಯದ ಮಧುರ ಭಕ್ತಿಯ ಸೌಜನ್ಯ ಗುಣ, ಮಹಾದೇವಿಯಕ್ಕನ ವಚನಗಳಲ್ಲಿ ಭಕ್ತಿಯ ತೀವ್ರತೆ, ವೈರಾಗ್ಯದ ಉತ್ಕಟತೆ ಇದೆ. ಪ್ರಕೃತಿಯ ಸಂಗತಿ ಅನುರಣಿತವಾಗಿದೆ. ವೈಚಾರಿಕ ಪ್ರಜ್ಞೆ ಮತ್ತು ಆತ್ಮಸ್ಥೈರ್ಯವಿದೆ, ಸಾಮಾಜಿಕ ವಿಡಂಬನೆ ಇದೆ. ಧರ್ಮತತ್ವದ ವಿವೇಚನೆ ಇದೆ, ಸತಿಪತಿಭಾವದ ವಿಭಿನ್ನ ನೆಲೆಯಿದೆ, ಮೇಲಾಗಿ ಮಹಿಳಾ ಅಭಿವ್ಯಕ್ತಿಯ ದನಿಯಿದೆ. ಇದುವೇ ಅಕ್ಕನ ವಚನಗಳ ಭಾಷೆ ರಚನಾ ವಿನ್ಯಾಸದ ವಿಶಿಷ್ಟತೆ. ಅನುಭಾವಿ ಕವಿಯೂ ಆಗಿದ್ದ ಅಕ್ಕಮಹಾದೇವಿ ಅಕ್ಕನವರ ವಚನಗಳು ಕನ್ನಡ ಸಾರಸ್ವತ ಲೋಕದ ಮೌಲ್ಯಾಧಾರಿತ ಬರವಣಿಗೆ ಗಳಾಗಿವೆ ಅಂದರೆ ತಪ್ಪಾಗಲಾರದು.
ಅಲ್ಲಿ ಅಲ್ಲಮಪ್ರಭು ಮತ್ತು ಅಕ್ಕನವರ ನಡುವೆ ನಡೆಯಿತೆನ್ನಲಾದ ಸಂಭಾಷಣೆ, ಅನುಭಾವದ ಉತ್ತುಂಗದ ಋಷಿವಾಣಿಯ ರೂಪದಲ್ಲಿ ವಚನಗಳಲ್ಲಿ ಸಂಗ್ರಹಿತವಾಗಿದೆ. ‘ಯೋಗಾಂಗತ್ರಿವಿಧಿ’ ಅಕ್ಕಮಹಾದೇವಿಯವರ ಪ್ರಮುಖ ಕೃತಿಯಾಗಿದೆ.
‘ಚೆನ್ನಮಲ್ಲಿಕಾರ್ಜುನ’ ಎಂಬ ಅಂಕಿತದಲ್ಲಿ ೪೩೦ ಕ್ಕೂ ಹೆಚ್ಚು ವಚನಗಳು ರಚಿಸಿದ ಮೇಧಾವಿ ಮಹಾದೇವಿ ಅಕ್ಕ.
ಪುರುಷ-ಪ್ರಧಾನ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಆಧ್ಯಾತ್ಮಿಕ ಹೋರಾಟಗಳಿಗೆ ಮಾರ್ಗದರ್ಶನ ನೀಡಿದರು. ಜೊತೆಗೆ ಕನ್ನಡ ಮಾತೃಭಾಷೆಯನ್ನು ದೇವ ಭಾಷೆಯನ್ನಾಗಿ ಮಾಡುವಲ್ಲಿ ಎಲ್ಲಾ ಶರಣರೊಂದಿಗೆ ಶ್ರಮಿಸಿ – ಕೈಜೋಡಿಸಿದರು. ಅಕ್ಕನವರು ನಡೆದು ಬಂದ ದಾರಿ ನಮ್ಮೆಲ್ಲರಿಗೂ ಪ್ರೇರಣದಾಯಕವಾಗಲಿ.
-ಸಂಗಮೇಶ ಎನ್ ಜವಾದಿ
ಲೇಖಕರು, ಬೀದರ್