Wednesday, January 28, 2026
Menu

ಅಜಿತ್ ಪವಾರ್ ಸಾವು ಆಘಾತಕಾರಿ, ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು: ಡಿಕೆ ಶಿವಕುಮಾರ್

“ಅಜಿತ್ ಪವಾರ್ ಅವರ ಸಾವು ಆಘಾತಕಾರಿ. ಅವರ ಸಾವಿನ ಸುದ್ದಿ ಕೇಳಿ ನನಗೂ ಗಾಬರಿಯಾಯಿತು. ರಾಜಕಾರಣಿಗಳಾದ ನಾವುಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಆಚೀಚೆ ಪ್ರಯಾಣ ಮಾಡುವಾಗ ಹುಷಾರಾಗಿ ಇರಬೇಕು. ಹೀಗೆ ಅನೇಕ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಕಳವಳ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು. “ಅತ್ಯಂತ ಪ್ರಗತಿಪರ ಆಲೋಚನೆ ಹೊಂದಿದ್ದಂತಹ ನಾಯಕ ಅಜಿತ್ ಪವಾರ್ ಅವರು. ಎಲ್ಲಾ ಕೆಲಸಗಳಿಗೂ ಸಹಕಾರ ಕೊಡುತ್ತಿದ್ದಾರೆ ಎಂದು ಮೊನ್ನೆಯಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿಯವರು ಹೇಳಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬ ವರ್ಗ ಹಾಗೂ ಬೆಂಬಲಿಗರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಅವರ ಕುಟುಂಬಸ್ಥರು ಬೆಂಗಳೂರಿನಲ್ಲೂ ನೆಂಟಸ್ಥಿಕೆ ಬೆಳೆಸಿದ್ದಾರೆ. ಮಂಗಳವಾರ ಅವರ ಸಂಬಂಧಿಕರನ್ನು ಭೇಟಿ ಮಾಡಿದ್ದೆ” ಎಂದರು.

“ಅಜಿತ್ ಪವಾರ್ ಹಿರಿಯ ನಾಯಕರು. ರಾಜಕೀಯ ಭವಿಷ್ಯಕ್ಕಾಗಿ ಪಕ್ಷ ಬಿಟ್ಟು ಮರಳಿ ಬಂದರು. ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ಪ್ರಸ್ತುತ ಮಹಾರಾಷ್ಟ್ರ ಡಿಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದರು” ಎಂದು ಡಿಸಿಎಂ ಹೇಳಿದರು. ಇತ್ತೀಚೆಗೆ ಹೆಚ್ಚು ವಿಮಾನ ಅಪಘಾತಗಳು ಆಗುತ್ತಿರುವ ಬಗ್ಗೆ ಹಾಗೂ ತಾಂತ್ರಿಕ ದೋಷ ಎಂದು ಹೇಳುತ್ತಿದ್ದಾರೆ ಎಂದಾಗ, “ಇದರ ಬಗ್ಗೆ ವಿಸ್ತೃತ ವರದಿ ಬಂದ ನಂತರ ಮಾತನಾಡುತ್ತೇನೆ. ತಾಂತ್ರಿಕ ದೋಷದ ಬಗ್ಗೆ ನನಗೆ ಏನು ಗೊತ್ತು. ಮುಂಬೈನ ಗೆಳೆಯರು ಸೇರಿ ದಂತೆ ಹಲವರು ವಿಷಯ ತಿಳಿಸಿದ್ದಾರೆ ಎಂದರು‌.

ಆರ್.ಬಿ.ತಿಮ್ಮಾಪುರ ಅವರ ರಾಜಿನಾಮೆಗೆ ವಿಪಕ್ಷಗಳು ಒತ್ತಾಯಿಸುತ್ತಿರುವ ಬಗ್ಗೆ ಕೇಳಿದಾಗ, ನನ್ನ ಪ್ರಕಾರ ಆರ್.ಬಿ. ತಿಮ್ಮಾಪುರ ಅವರಿಗೂ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎನಿಸುತ್ತದೆ. ವಿಪಕ್ಷಗಳು ಬೇಕಂತಲೇ ಉತ್ಪ್ರೇಕ್ಷೆ ಮಾಡುತ್ತಿವೆ. ಇದರ ಬಗ್ಗೆ ಮುಖ್ಯಮಂತ್ರಿಯವರ ಬಳಿ ವಿವರವಾಗಿ ಮಾತನಾಡಿ ಆನಂತರ ತಿಳಿಸುತ್ತೇನೆ. ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *