ಜೂನ್ 21ರಿಂದ ಜುಲೈ 15ರವರೆಗೆ ಮೂರು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಇತರ 16 ಮಾರ್ಗಗಳಲ್ಲಿ ಸೇವೆಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ನಂತರ ಕಾರ್ಯಾಚರಣೆಯಲ್ಲಿನ ಅಡಚಣೆಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.
ದೆಹಲಿ-ನೈರೋಬಿ, ಅಮೃತಸರ-ಲಂಡನ್ (ಗ್ಯಾಟ್ವಿಕ್), ಗೋವಾ (ಮೋಪಾ)-ಲಂಡನ್ (ಗ್ಯಾಟ್ವಿಕ್) ನಡುವಿನ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಇತರ ಮಾರ್ಗಗಳಲ್ಲಿ 16 ಅಂತರರಾಷ್ಟ್ರೀಯ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ. ಉತ್ತರ ಅಮೆರಿಕದಲ್ಲಿ ದೆಹಲಿ-ಟೊರೊಂಟೊ, ದೆಹಲಿ-ವ್ಯಾಂಕೋವರ್, ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ, ದೆಹಲಿ-ಚಿಕಾಗೋ ಮತ್ತು ದೆಹಲಿ-ವಾಷಿಂಗ್ಟನ್ ಮಾರ್ಗಗಳ ನಡುವೆ ವಿಮಾನ ಸಂಚಾರ ಕಡಿಮೆಯಾಗಲಿದೆ.
ಎಲ್ಲಾ ವಿಮಾನಗಳ ಕಟ್ಟುನಿಟ್ಟಿನ ಭದ್ರತಾ ತಪಾಸಣೆಗೆ ಸಮಯ ನೀಡುವುದು, ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ಮುಚ್ಚುವಿಕೆಯಿಂದಾಗಿ ಹಾರಾಟದ ಅವಧಿ ಹೆಚ್ಚಾಗಿರುವ ಕಾರಣ ಈ ಕ್ರಮಕ್ಕೆ ಸಂಸ್ಥೆ ಮುಂದಾಗಿದೆ. ತೊಂದರೆಗೊಳಗಾದ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದೆ. ಪರ್ಯಾಯ ವಿಮಾನಗಳು, ಉಚಿತ ಮರು-ವೇಳಾಪಟ್ಟಿ ಮತ್ತು ಪೂರ್ಣ ಮರುಪಾವತಿಯಂತಹ ಆಯ್ಕೆಗಳನ್ನು ಒದಗಿಸುತ್ತಿದ್ದು, ಪ್ರಯಾಣಿಕರನ್ನು ನೇರವಾಗಿ ಸಂಪರ್ಕಿಸುತ್ತಿದೆ ಎಂದು ಏರ್ ಇಂಡಿಯಾ ಹೇಳಿದೆ. ಏರ್ ಇಂಡಿಯಾ ತನ್ನ ವೈಡ್-ಬಾಡಿ ವಿಮಾನಗಳ ಹಾರಾಟದಲ್ಲಿ ಶೇಕಡಾ 15 ಈಗಾಗಲೇ ಕಡಿತ ಘೋಷಿಸಿದೆ.