ಅನಾರೋಗ್ಯದ ಕಾರಣ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ನಿತ್ಯದ ಚೆಕಪ್ ನಡೆಸಿಇಸಿಜಿ ಪರೀಕ್ಷೆ ಮಾಡಿದ್ದು, ಖರ್ಗೆಯವರು ಇಂದು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.
ಬಿಹಾರ ಚುನಾವಣೆ ಪ್ರಯುಕ್ತ ಸರಣಿ ಪ್ರವಾಸ, ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಜನರಲ್ ಚೆಕಪ್ಗಾಗಿ ಆಸ್ಪತ್ರೆ ದಾಖಲಾಗಿದ್ದಾರೆ.
ಬಿಹಾರ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ವಿರೋಧಿಸುವ ಬಿಜೆಪಿ ಬಿಹಾರದಲ್ಲಿ ಮಹಿಳೆಯರಿಗೆ 10 ಸಾವಿರ ರೂ. ನೀಡಲು ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿಯವರು ಮಾಡುವುದೆಲ್ಲ ಸರಿ, ನಾವು ಮಾಡಿದರೆ ಅದರ ಬಗ್ಗೆ ಟೀಕೆ ಟಿಪ್ಪಣಿ ಮಾಡ್ತಾರೆ. ನರೇಗಾ, ಫುಡ್ ಸೆಕ್ಯೂರಿಟಿ ಸೇರಿ ಮುಂತಾದ ಕಾರ್ಯಕ್ರಮಗಳನ್ನು ಬಡವರಿಗಾಗಿ ತಂದಿದ್ದೇವೆ. ಇವರು ಹಣ ನೀಡುತ್ತಿರುವುದು ಚುನಾವಣಾ ದೃಷ್ಟಿಯಿಂದ ಮಾತ್ರ ಎಂದು ಖರ್ಗೆ ಹರಿಹಾಯ್ದಿದ್ದರು.
ಪ್ರಧಾನಿ ನರೇಂದ್ರ ಮೋದಿ “ವೋಟ್ ಚೋರಿ” ಮೂಲಕ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಎನ್ಡಿಎಯ ಡಬಲ್ ಎಂಜಿನ್ ಸರ್ಕಾರವನ್ನು ಶೀಘ್ರದಲ್ಲೇ ಮತಗಳಿಂದ ಹೊರ ಹಾಕಲಾಗುವುದು ಮತ್ತು ಬಡವರು, ಹಿಂದುಳಿದವರು ಮತ್ತು ದಲಿತರ ಹೊಸ ಸರ್ಕಾರ ರಚನೆಯಾಗಲಿದೆ. ಬಿಹಾರದಲ್ಲಿ ಈ ಡಬಲ್ ಎಂಜಿನ್ ಸರ್ಕಾರ 6 ತಿಂಗಳಲ್ಲಿ ಇರುವುದಿಲ್ಲ, ಹೊಸ ಸರ್ಕಾರ ಬಡವರು, ದಲಿತರು, ಹಿಂದುಳಿದವರದ್ದಾಗಿರುತ್ತದೆ ಎಂದು ಬಿಹಾರದಲ್ಲಿ ನಡೆದಿದ್ದ ಅಧಿಕಾರ ಮತ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಗಂಭೀರ ಆರೋಪ ಮಾಡಿದ್ದರು.