Menu

ಮೆಟ್ರೋ ನಿಲ್ದಾಣಗಳ ಭದ್ರತೆಗೆ ಎಐ ಆಧಾರಿತ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ

namma metro

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿರುವ ಬಿಎಂಆರ್‌ಸಿಎಲ್‌ ನಗರದ 6 ನಿಲ್ದಾಣಗಳಲ್ಲಿ ಎಐ ಆಧಾರಿತ ಸಿಸಿ ಟಿವಿ ಕ್ಯಾಮೆರಾ ನಿಗಾ ವ್ಯವಸ್ಥೆ ಅಳವಡಿಕೆ ಮಾಡಿದೆ.

ಮೊದಲ ಹಂತದಲ್ಲಿ ನಮ್ಮ ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ಆರು ಮೆಟ್ರೋ ನಿಲ್ದಾಣಗಳ ಈ ಹೊಸ ಭದ್ರತಾ ವ್ಯವಸ್ಥೆಯನ್ನು ಅಳಡಿಸಿದ್ದು,ಮುಂದಿನ ದಿನಗಳಲ್ಲಿ ಮತ್ತಷ್ಟು ನಿಲ್ದಾಣಗಳಿಗೆ ಅಳವಡಿಸುವ ಯೋಜನೆ ಬಿಎಂಆರ್‌ಸಿಎಲ್‌ ಹೊಂದಿದೆ.

ನಮ್ಮ ಮೆಟ್ರೋ ಪ್ರಯಾಣಿಕರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಳ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಈ ಕ್ರಮಕ್ಕೆ ಮುಂದಾಗಿದೆ.ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮಾಹಿತಿ ನೀಡಿದ್ದು, ” ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆಯ ನಡುವಿನ ಆರು ಮೆಟ್ರೋ ನಿಲ್ದಾಣಗಳಲ್ಲಿ ಸುಧಾರಿತ ಸಿಸಿಟಿವಿ ವ್ಯವಸ್ಥೆ ಅಳವಡಿಸಿದೆ.

ಇದು ನಿಲ್ದಾಣದ ಒಳಗಿನ ಭಾಗಗಳ ಜೊತೆಗೆ ಸುತ್ತಲಿನ ಪ್ರದೇಶಗಳನ್ನೂ ಗಮನಿಸುತ್ತಿದ್ದು, ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಅಪಾಯಗಳನ್ನು ತಕ್ಷಣ ಗುರುತಿಸಿ, ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ನೆರವಾಗುತ್ತದೆ ” ಎಂದು ತಿಳಿಸಿದೆ.
ಇನ್ನು ಇತ್ತೀಚೆಗೆ ಪ್ರಯಾಣಿಕರ ಅನುಕೂಲಕ್ಕೆ ಬೈಯ್ಯಪ್ಪನಹಳ್ಳಿಯಲ್ಲಿ 10 ಸ್ವಯಂ ಚಾಲಿತ ಟಿಕೆಟ್‌ ಯಂತ್ರ ಅಳವಡಿಕೆ ಮಾಡಲಾಗಿತ್ತು.

ಏನೆಲ್ಲಾ ಪ್ರಯೋಜನ?

ಈ ನಿಗಾ ವ್ಯವಸ್ಥೆಯನ್ನು ಮೇ 6 ರಂದು ಪ್ರಾರಂಭಿಸಲಾಗಿದೆ. ನಿಲ್ದಾಣದ ಮುಂದೆ ಇರುವ ವಾಹನಗಳ ಸಂಖ್ಯಾ ಫಲಕಗಳನ್ನು ಗುರುತಿಸಲು “ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್” ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಎಐ ಆಧಾರಿತ ವಿಡಿಯೋ ವಿಶ್ಲೇಷಣೆಯೊಂದಿಗೆ, ಈ ತಂತ್ರಜ್ಞಾನ ಶಂಕಾಸ್ಪದ ಚಟುವಟಿಕೆಗಳು, ಅನುಮಾನಾಸ್ಪದ ಘಟನೆಗಳನ್ನು ತಕ್ಷಣ ಪತ್ತೆಹಚ್ಚಲು ಸಹಕಾರಿಯಾಗಿದೆ ” ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ಬಿಎಂಆರ್‌ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಮಾತನಾಡಿ, “ ಪ್ರಯಾಣಿಕರ ಭದ್ರತೆ ಬಿಎಂಆರ್‌ಸಿಎಲ್‌ನ ಪ್ರಮುಖ ಆದ್ಯತೆಯಾಗಿದೆ. ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಭದ್ರತೆಯನ್ನು ಹೆಚ್ಚಿಸಲು ಶ್ರಮಿಸುತ್ತಿದೆ. ಈ ಹೊಸ ಎಐ ಮತ್ತು ಎಎನ್‌ಪಿಆರ್‌ ತಂತ್ರಜ್ಞಾನ ನಮಗೆ ನಿಲ್ದಾಣದ ನಿರಂತರ ಕಾರ್ಯ ಚಟುವಟಿಕೆಗಳನ್ನು ಗಮನಿಸಲು ಮತ್ತು ತಕ್ಷಣ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಸಾರ್ವಜನಿಕ ಸುರಕ್ಷತೆಗೆ ಬದ್ಧತೆಯನ್ನೂ ತೋರಿಸುತ್ತದೆ ” ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *