Menu

ಚಾಮರಾಜನಗರದಲ್ಲಿ ಹುಲಿ ನಂತರ ಚಿರತೆ ಶವ ಪತ್ತೆ!

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಾವು, ಕೋತಿಗಳ ಮಾರಣಹೋಮ ನಂತರ ಇದೀಗ ಚಿರತೆಯ ಶವ ಪತ್ತೆಯಾಗಿದೆ.

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಬಳಿ ಚಿರತೆ ಶವ ಶುಕ್ರವಾರ ಪತ್ತೆಯಾಗಿದೆ. ಗಣಿ ತ್ಯಾಜ್ಯದ‌ ಕಲ್ಲು ಸಂಗ್ರಹಿಸಿರುವ ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದೆ.

5 ವರ್ಷದ ಗಂಡು ಚಿರತೆ ಕಳೇಬರದ ಬಳಿ ನಾಯಿ ಮತ್ತು ಕರುವಿನ ಶವವೂ ಪತ್ತೆಯಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹುಲಿ ಮಾದರಿ ಚಿರತೆಯನ್ನು ಕೂಡ ವಿಷಹಾಕಿ ಕೊಲ್ಲಲಾಗಿದೆಯೇ ಎಂಬ ಅನುಮಾನ ಉಂಟಾಗಿದೆ.

ಸ್ಥಳಕ್ಕೆ ಬಿಆರ್​​ಟಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೆಟಲ್ ಡಿಟೆಕ್ಟರ್ ಜೊತೆಗೆ ಶ್ವಾನದಳವೂ ಆಗಮಿಸಿ ತಪಾಸಣೆ ನಡೆಸಿದೆ. ಸದ್ಯ ಬಿಆರ್​​ಟಿ ಡಿಸಿಎಫ್ ಶ್ರೀಪತಿ ಹಾಗೂ ಸಿಸಿಎಫ್ ಹೀರಾಲಾಲ್ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

ಚಿರತೆ ಕಳೇಬರದ ಸುತ್ತಮುತ್ತ ಮೆಟಲ್ ಡಿಟೆಕ್ಟರ್​​​ನಿಂದಲೂ ಶೋಧ ಮಾಡಲಾಗಿದ್ದು, ಯಾರಾದರೂ ಗುಂಡು ಹೊಡೆದು ಕೊಂದಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಚಿರತೆ ಕಳೇಬರದ ಪಕ್ಕದಲ್ಲೇ ಕರು ಹಾಗೂ ಒಂದು ಶ್ವಾನದ ಶವವೂ ಬಿದ್ದಿರುವುದು ಕಂಡುಬಂದಿದೆ. ಹೀಗಾಗಿ ಯಾರಾದರೂ ವಿಷ ಹಾಕಿ ಕೊಂದಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಕಲ್ಲು ಕ್ವಾರಿ ಪಕ್ಕದಲ್ಲೇ ಚಿರತೆ ಮೃತಪಟ್ಟಿರುವ ಹಿನ್ನಲೆ ಕಲ್ಲು ಕ್ವಾರಿ ಮಾಲೀಕನ ಮೇಲೆಯೂ ಅನುಮಾನ ವ್ಯಕ್ತವಾಗಿದೆ.

ಚಿರತೆಯನ್ನು ವಿಷ ಹಾಕಿ ಕೊಲೆ ಮಾಡಿರಬಹುದು ಎಂಬ ಅನುಮಾನ ಮೇಲ್ನೋಟಕ್ಕೆ ವ್ಯಕ್ತವಾಗಿದೆ ಎಂದು ಬಿಆರ್​​ಟಿ ಡಿಸಿಎಫ್ ಶ್ರೀಪತಿ ‘ಟಿವಿ9’ಗೆ ತಿಳಿಸಿದ್ದಾರೆ. ಚಿರತೆ ಕಳೇಬರದ ಪಕ್ಕದಲ್ಲೇ ನಾಯಿ, ಕರುವಿನ ಕಳೇಬರ ಪತ್ತೆಯಾಗಿದೆ. ಹಾಗಾಗಿ ಚಿರತೆಗೆ ವಿಷ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ, ನಾಯಿ, ಕರುವಿನ ಕಳೇಬರದ ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಲ್ಯಾಬ್​ಗೆ ಕಳುಹಿಸಲಾಗುತ್ತದೆ. ಎಫ್​ಎಸ್​ಎಲ್​​​ ವರದಿ ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *