ಒಳಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಒಂದು ವಾರದಲ್ಲಿ ನೀಡಲಿರುವ ಮಧ್ಯಂತರ ವರದಿ ಬಳಿಕ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಸಚಿವರಾದ ಜಿ.ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಂಟಿ ಮಾಧ್ಯಮಗೋಷ್ಟಿ ನಡೆಸಿದ ಸಚಿವರಾದ ಹೆಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಹಾಗೂ ಶಿವರಾಜ್ ತಂಗಡಗಿ, ಒಳಮೀಸಲಾತಿ ಸಂಬಂಧ ಆಗಿರುವ ಪ್ರಗತಿ ಬಗ್ಗೆ ನಾಗಮೋಹನ್ ದಾಸ್ ಮಾಹಿತಿ ನೀಡಿದ್ದಾರೆ. ಒಳಮೀಸಲಾತಿ ವರದಿ ಬೇಗ ನೀಡುವಂತೆ ಸಿಎಂ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಒಳಮೀಸಲಾತಿ ಜಾರಿಗೆ ಸರ್ಕಾರಕ್ಕೆ ಬದ್ಧತೆ ಇದೆ ಎಂದರು.
ಸಿಎಂ ಜೊತೆ ಚರ್ಚಿಸಿ ತೀರ್ಮಾನ: ದತ್ತಾಂಶ ಆಧಾರದಲ್ಲಿ ಒಳಮೀಸಲಾತಿ ವರದಿ ನೀಡಲು ಸೂಚಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವಾರದೊಳಗೆ ಮಧ್ಯಂತರ ವರದಿ ನೀಡಲಿದ್ದಾರೆ. ಮಧ್ಯಂತರ ವರದಿ ಸಲ್ಲಿಕೆ ಯಾದ ಬಳಿಕ ಒಳ ಮೀಸಲಾತಿಯನ್ನು ಸುಪ್ರೀಂಕೋರ್ಟ್ ತೀರ್ಪಿನ ಅಂಶಗಳ ಆಧಾರದಲ್ಲಿ ಜಾರಿ ಮಾಡಲು ಕ್ರಮ ವಹಿಸಲಾಗುವುದು. ಒಳಮೀಸಲಾತಿ ಜಾರಿ ಮಾಡಬೇಕು ಎಂಬುದು ನಮ್ಮ ಬದ್ಧತೆ. ಒಳಮೀಸಲಾತಿಯನ್ನು ನ್ಯಾಯಾ ಲಯಗಳಲ್ಲೂ ಎತ್ತಿ ಹಿಡಿಯುವಂತಿರಬೇಕು. ಮಧ್ಯಂತರ ವರದಿ ಮೇಲೆ ಚರ್ಚೆ ಮಾಡಿದ ಬಳಿಕ ಸಿಎಂ ಜೊತೆ ಚರ್ಚಿಸಿ ಜಾರಿ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಂಬಡ್ತಿ ತಡೆ: ಒಳಮೀಸಲಾತಿ ಸಂಬಂಧ ಸರ್ಕಾರಿ ಸಿಬ್ಬಂದಿಗಳ ಜಾತಿ ಮಾಹಿತಿಗಳನ್ನು ಬಹುತೇಕ ಎಲ್ಲಾ ಇಲಾಖೆಗಳು ಆಯೋಗಕ್ಕೆ ಸಲ್ಲಿಕೆ ಮಾಡಿವೆ. ಇದರ ಜೊತೆಗೆ ಒಳಮೀಸಲಾತಿ ಬಗ್ಗೆ ತೀರ್ಮಾನ ಆಗುವ ತನಕ ಬ್ಯಾಕ್ ಲಾಗ್ ಹುದ್ದೆ, ಮುಂಬಡ್ತಿ, ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯಲಾಗುವುದು ಎಂದರು.
ಸಂವಿಧಾನದ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಸಂವಿಧಾನ ರಕ್ಷಣೆಗೆ ಬದ್ಧವಾಗಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲೇ ಈ ಬಗ್ಗೆ ನಾವು ಸ್ಪಷ್ಟಪಡಿಸಿದ್ದೇವೆ. ಬೆಳಗಾವಿಯಲ್ಲಿ ಈ ಬಗ್ಗೆ ‘ಜೈ ಬಾಪು ಜೈ ಭೀಮ್, ಜೈ ಸಂವಿಧಾನ’ ಎಂಬ ಸಮಾವೇಶವನ್ನೂ ಮಾಡಿದ್ದೇವೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನಮ್ಮ ಪಕ್ಷ ಹಾಗೂ ಮತ್ತು ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿದೆ. ಸಂವಿಧಾನದ ಆಶಯ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.