ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಪೆಟ್ರೋಲ್, ಡೀಸೆಲ್ ದರ ಶತಕದ ದಾಟಿದ ನಂತರ ಇದೀಗ ಡಾಲರ್ ಎದುರು ರೂಪಾಯಿ ಮೌಲ್ಯ ಶತಕದ ದಾಟುವ ಹಾದಿಯಲ್ಲಿದೆ.
ಕಳೆದ 8 ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ 100 ದಾಟಿದ ನಂತರ ಕೆಳಗೆ ಇಳಿದಿರಲಿಲ್ಲ. ಇತ್ತೀಚೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಲ್ಪ ಪ್ರಮಾಣದ ತೆರಿಗೆ ಇಳಿಸಿದ್ದರಿಂದ 100ರ ಆಸುಪಾಸಿನಲ್ಲೇ ಇದೆ.
ಇದೀಗ ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 90ರ ಗಡಿ ದಾಟಿದ್ದು, 100 ದಾಟುವ ಭೀತಿಗೆ ಒಳಗಾಗಿದೆ.
ವಾರದ ಆರಂಭದಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 90 ಗಡಿ ದಾಟಿತ್ತು. ಇದೀಗ ಗುರುವಾರದ ವಾಹಿವಾಟು ಆರಂಭಿಸಿದ ಆರಂಭದಲ್ಲೇ 28 ಪೈಸೆಯಷ್ಟು ಕುಸಿತ ಕಂಡಿತು ಇದರಿಂದ ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖೆ ಮೊತ್ತವಾದ 90.43 ರೂ.ಗೆ ಕುಸಿತ ಕಂಡಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಗಣನೀಯ ಹೊರಹರಿವು ಮತ್ತು ಭಾರತೀಯ ರಿಸರ್ವ್ ಬ್ಯಾಂಕಿ(ಆರ್‌ಬಿಐ)ನ ನಿರ್ಬಂಧಿತ ಹಸ್ತಕ್ಷೇಪಗಳ ನಡುವೆಯೂ ಷೇರುಪೇಟೆಯಲ್ಲಿ ರೂಪಾಯಿ ಮೌಲ್ಯ ಇಳಿದಿದೆ.
ಕಾರಣವೇನು?: ನಿರ್ಣಾಯಕ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ನಿರ್ಧಾರಕ್ಕೆ ಮುಂಚಿತವಾಗಿ ಕೇಂದ್ರ ಬ್ಯಾಂಕ್‌ಗಳ ಹಸ್ತಕ್ಷೇಪ ಮತ್ತು ಆಮದುದಾರರಿಂದ ಡಾಲರ್‌ಗೆ ಬೇಡಿಕೆ ಹೆಚ್ಚಿದ ಕಾರಣ ರೂಪಾಯಿ ಮೇಲೆ ಒತ್ತಡ ಉಂಟಾಗಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ಹೇಳಿದ್ದಾರೆ.
ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇಂದು ರೂಪಾಯಿ ಮೌಲ್ಯ 90.36ಕ್ಕೆ ಆರಂಭವಾಯಿತು. ಆರಂಭಿಕ ವ್ಯವಹಾರಗಳಲ್ಲಿ ಡಾಲರ್ ವಿರುದ್ಧ 90.43ಕ್ಕೆ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದು, ಹಿಂದಿನ ಮುಕ್ತಾಯದ ಮಟ್ಟಕ್ಕಿಂತ 28 ಪೈಸೆ ನಷ್ಟ ದಾಖಲಿಸಿತು.
ಬುಧವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಇದೇ ಮೊದಲ ಬಾರಿಗೆ ಡಾಲರ್ ಎದುರು 90 ರೂಪಾಯಿಗಳ ಮಟ್ಟಕ್ಕೆ ಕುಸಿದು, 90.15 ದಾಖಲಾಗುವ ಮೂಲಕ ಹೊಸ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಯಿತು.
ರೂಪಾಯಿ ಮೌಲ್ಯ ಕುಸಿತ ಹಣದುಬ್ಬರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ತಿಳಿಸಿದ್ದರು. ರೂಪಾಯಿ ಮೌಲ್ಯ ಕುಸಿತವು ಹೊರದೇಶಗಳಿಗೆ ಸಾಗಣೆಗೆ ಸಹಾಯ ಮಾಡಿ, ಆಮದು ದುಬಾರಿಯಾಗುತ್ತದೆ. ರತ್ನ ಮತ್ತು ಆಭರಣಗಳು, ಪೆಟ್ರೋಲಿಯಂ ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಆಮದು ಅವಲಂಬಿತ ವಲಯಗಳು ಕಡಿಮೆ ಪ್ರಯೋಜನಗಳನ್ನು ಪಡೆಯಬಹುದು. ಇದು ಹಣದುಬ್ಬರದ ನಿರೀಕ್ಷೆಗಳ ಮೇಲೆ ಒತ್ತಡ ಹೇರುತ್ತದೆ. ಆಮದನ್ನು ದುಬಾರಿಯಾಗಿಸುತ್ತದೆ ಎಂದಿದ್ದರು.
6 ಕರೆನ್ಸಿಗಳ ವಿರುದ್ಧ ಡಾಲರ್ ಸೂಚ್ಯಂಕವು ಶೇ.0.14 ಏರಿಕೆಯಾಗಿ 98.99ಕ್ಕೆ ವಹಿವಾಟು ನಡೆಸುತ್ತಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಭವಿಷ್ಯದ ವಹಿವಾಟಿನಲ್ಲಿ ಪ್ರತಿ ಬ್ಯಾರೆಲ್‌ಗೆ ಶೇ 0.49ರಷ್ಟು ಏರಿಕೆಯಾಗಿ 62.98 ಡಾಲರ್‌ಗಳಿಗೆ ತಲುಪಿದೆ.
ಹೇಗಿದೆ ಷೇರು ಮಾರುಕಟ್ಟೆ?: ದೇಶೀಯ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಇಂದು ಸೆನ್ಸೆಕ್ಸ್ 45.99 ಪಾಯಿಂಟ್‌ಗಳ ಏರಿಕೆಯಾಗಿ 85,152.80ಕ್ಕೆ ತಲುಪಿದರೆ, ನಿಫ್ಟಿ 14.35 ಪಾಯಿಂಟ್‌ಗಳ ಏರಿಕೆ ಕಂಡು 26,000.35ಕ್ಕೆ ತಲುಪಿದೆ.


