ರಾಜ್ಯದ ಕರ್ನಾಟಕ ಪಬ್ಲಿಕ್ ಶಾಲೆಗಳು, ಬೆಂಗಳೂರು ಪಬ್ಲಿಕ್ ಶಾಲೆಗಳು ಮತ್ತು ಪಿ.ಎಂ.ಶ್ರೀ ಶಾಲೆಗಳಲ್ಲಿ ದ್ವಿ-ಭಾಷಾ ಮಾಧ್ಯಮದ ತರಗತಿಗಳಿಗೆ ಮಕ್ಕಳ ಗರಿಷ್ಠ ದಾಖಲಾತಿ ಮಿತಿ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಶೈಕ್ಷಣಿಕ ವರ್ಷ 2025-26ರಿಂದ ಜಾರಿಗೆ ಬರುವಂತೆ, ಎಲ್‌ಕೆಜಿ ಮತ್ತು ಯುಕೆಜಿ ಪ್ರತಿ ತರಗತಿಗೆ ಗರಿಷ್ಠ 40 ಮಕ್ಕಳು, 1 ರಿಂದ 7ನೇ ತರಗತಿ ಗರಿಷ್ಠ 50 ಹಾಗೂ 8 ರಿಂದ 10ನೇ ತರಗತಿ ಗರಿಷ್ಠ 50 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅನುಮತಿಸಲಾಗಿದೆ. ಈ ಮೊದಲು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಿಗೆ ಗರಿಷ್ಠ ದಾಖಲಾತಿ ಮಿತಿಯನ್ನು 30 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿತ್ತು. ಶಿಕ್ಷಣ ಇಲಾಖೆ ನೀಡಿರುವ ಪ್ರಸ್ತಾವನೆ ಪರಿಶೀಲಿಸಿದ ನಂತರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಕೆಪಿಎಸ್‌ಗಳಲ್ಲಿ ದ್ವಿ-ಭಾಷಾ ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗಿದ್ದು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಪೋಷಕರು ಹಾಗೂ ಜನಪ್ರತಿನಿಧಿಗಳಿಂದ ದಾಖಲಾತಿ ಮಿತಿ ಹೆಚ್ಚಿಸುವಂತೆ ನಿರಂತರ ಬೇಡಿಕೆ ಇತ್ತು. ರಾಜ್ಯದಲ್ಲಿ 2017-18ನೇ ಸಾಲಿನಿಂದ 308 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿ ಪೂರ್ವ ಪ್ರಾಥಮಿಕ ತರಗತಿಗಳು, ಕನ್ನಡ/ಇತರ ಮಾಧ್ಯಮದ ತರಗತಿಗಳು ಹಾಗೂ ಒಂದನೇ ತರಗತಿಯಿಂದ ದ್ವಿ-ಭಾಷಾ ಮಾಧ್ಯಮ ತರಗತಿ ಗಳನ್ನು ಪ್ರಾರಂಭಿಸಲಾಗಿದೆ.
ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳದ ಮಿತಿಯು 2025-26ನೇ ಶೈಕ್ಷಣಿಕ ಸಾಲಿನಿಂದಲೇ ಎಲ್ಲ ಶಾಲೆಗಳಲ್ಲಿ ಜಾರಿಗೆ ಬರಲಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಈ ಸಂಬಂಧ ಸುತ್ತೋಲೆ ಹೊರಡಿಸಿ ನಿಯಮಗಳಂತೆ ಅನುಷ್ಠಾನ ಕ್ರಮ ವಹಿಸಬೇಕು. ಪೂರ್ವ ಪ್ರಾಥಮಿಕ ವಿಭಾಗದ ಪ್ರತಿ ತರಗತಿಯ ಶಿಕ್ಷಕ/ಶಿಕ್ಷಕಿಯ ಜೊತೆ ಒಬ್ಬ ಆಯಾ ಕಡ್ಡಾಯವಾಗಿ ಇರಬೇಕು ಎಂದು ಷರತ್ತುಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.