ರಾಜ್ಯ ಪೊಲೀಸ್ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್‌ಗೆ ಸೇವಾ ಹಿರಿತನದ ಆಧಾರದಲ್ಲಿ ಡಿಜಿಪಿಗೆ ಮುಂಬಡ್ತಿ ನೀಡಬೇಕಿದ್ದ ಸರ್ಕಾರ ಈಗ 6 ವರ್ಷದ ಹಿಂದಿನ ಪ್ರಕರಣವನ್ನು ಕೆದಕಿ ಇಲಾಖಾ ತನಿಖೆಗೆ ಆದೇಶಿಸಿದೆ.
ಸರ್ಕಾರದ ಈ ಕ್ರಮ ಐಪಿಎಸ್ ಅಧಿಕಾರಿಗಳ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದೂ ಹೇಳಲಾಗುತ್ತಿದೆ. ಅಲೋಕ್ ಕುಮಾರ್ ವಿರುದ್ಧ ಸರ್ಕಾರ ಹಗೆ ಸಾಧಿಸುತ್ತಿದೆಯೇ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ.
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದ ಅವಧಿಯಲ್ಲಿ ಕೇಳಿ ಬಂದಿದ್ದ ಫೋನ್ ಟ್ಯಾಪಿಂಗ್ ಹಾಗೂ ಅಕ್ರಮವಾಗಿ ಮೊಬೈಲ್ ಕರೆ ವಿವರ(ಸಿಡಿಆರ್) ಪಡೆದ ಪ್ರಕರಣದಲ್ಲಿ ಅಲೋಕ್ ಕುಮಾರ್ ವಿರುದ್ಧ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ.
ಇಲಾಖಾ ವಿಚಾರಣೆಗೆ ಆದೇಶ ನೀಡುವುದಾದರೆ ಈ ಹಿಂದೆಯೇ ನೀಡಬಹುದಿತ್ತು. ಆದರೆ ಡಿಜಿಪಿ ಸ್ಥಾನಕ್ಕೆ ಪದೋನ್ನತಿ ಸಿಗುವ ಸಮಯದಲ್ಲೇ ಹಳೆಯ ಪ್ರಕರಣವನ್ನು ಕೆದಕಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಎಂ.ಎ ಸಲೀಂ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಕಾರಣ ತೆರವಾದ ಡಿಜಿಪಿ ಸ್ಥಾನಕ್ಕೆ 1994ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ಅವರಿಗೆ ಡಿಜಿಪಿ ಆಗಿ ಮುಂಬಡ್ತಿ ಸಿಗಬೇಕಿತ್ತು. ಆದರೆ ಈಗ ಇಲಾಖಾ ವಿಚಾರಣೆಗೆ ಆದೇಶ ನೀಡಿರುವುದರಿಂದ ಮುಂಬಡ್ತಿ ನೀಡಲು ಸಾಧ್ಯವಿಲ್ಲ. ಅದೇ ಬ್ಯಾಚ್‌ನ ಹಿರಿಯ ಅಧಿಕಾರಿಯಾದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ಡಿಜಿಪಿಯಾಗಿ ಮುಂಬಡ್ತಿ ಸಿಗಲಿದೆ.
ಫೋನ್‌ಟ್ಯಾಪಿಂಗ್, 50ಕ್ಕೂ ಹೆಚ್ಚು ಮಂದಿಯ ಸಿಡಿಆರ್ ಪಡೆದ ಆರೋಪದಡಿ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ.
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದ ಅವಧಿಯಲ್ಲಿ ಅಲೋಕ್ ಕುಮಾರ್ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದರು. 2019 ರಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಲು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿತ್ತು. ಈ ವೇಳೆ ಕುಮಾರಸ್ವಾಮಿ ಸರ್ಕಾರವು ಕೆಲವು ಅಧಿಕಾರಿಗಳು, ಸ್ವಾಮೀಜಿಗಳು ಮತ್ತು ರಾಜಕೀಯ ಮುಖಂಡರ ಫೋನ್ ಟ್ಯಾಪಿಂಗ್ ಮತ್ತು ಸಿಡಿಆರ್ ಸಂಗ್ರಹಿಸಿರುವ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಚರ್ಚೆ ಜೋರಾಗುತ್ತಿದ್ದ ಸಮಯದಲ್ಲೇ ಕುಮಾರಸ್ವಾಮಿ ಅವರು ಅಲೋಕ್ ಕುಮಾರ್ ಅವರನ್ನು ಎಡಿಜಿಪಿಯಾಗಿ ಮುಂಬಡ್ತಿ ನೀಡಿ, ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದ್ದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲೋಕ್ ಕುಮಾರ್ ಅವರನ್ನು ಸಿಬಿಐಗೆ ವರ್ಗಾವಣೆ ಮಾಡಿ ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಅಲೋಕ್ ಕುಮಾರ್ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಭಾಸ್ಕರ್‌ರಾವ್ ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಫೋನ್ ಟ್ಯಾಪಿಂಗ್ ಮಾಡಿದ್ದ ಆಡಿಯೋ ಒಂದು ವೈರಲ್ ಆಗಿತ್ತು. ಅಲೋಕ್ ಕುಮಾರ್ ಸಿಎಟಿ ಮೂಲಕ ತಡೆಯಾಜ್ಞೆ ತಂದಿದ್ದರೆ ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ಭಾಸ್ಕರ್‌ರಾವ್ ಪ್ರಶ್ನಿಸಿದ್ದರು.