ಕೀಳುಮಟ್ಟದ ಸಂದೇಶ ಕಳುಹಿಸಿದ 43 ಮಂದಿಯ ವಿರುದ್ಧ ಪೊಲೀಸ್ ಆಯುಕ್ತರಿಗೆ ನಟಿ ರಮ್ಯಾ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಅಭಿಮಾನಿಗಳ ವಿರುದ್ಧ ಬೆಂಗಳೂರಿನಲ್ಲಿ ಸೋಮವಾರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸೆಲೆಬ್ರೆಟಿಯಾಗಿರುವ ನನ್ನ ವಿರುದ್ಧವೇ ಇಷ್ಟು ಕೀಳುಮಟ್ಟದ ಸಂದೇಶ ಕಳುಹಿಸಿದ್ದಾರೆ ಅಂದರೆ ಸಾಮಾನ್ಯ ಮಹಿಳೆಯರ ಪಾಡೇನು? ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಗೂ ನಿಮಗೂ ಏನು ವ್ಯಾತ್ಯಾಸ ಎಂದು ಅವರು ಪ್ರಶ್ನಿಸಿದರು.
ಕೆಲವು ದಿನಗಳ ಹಿಂದೆ ದರ್ಶನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಪೋಸ್ಟ್ ಮಾಡಿದ್ದೆ. ಅದಕ್ಕೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಹಿಂದೆಯೂ ಸಾಕಷ್ಟು ಜನರು ಕೆಲವು ವಿಷಯಗಳಿಗೆ ಟ್ರೋಲ್ ಮಾಡಿದ್ದರು. ಆದರೆ ಇಷ್ಟು ಕೀಳುಮಟ್ಟದ ಪೋಸ್ಟ್ ಗಳ ಮೂಲಕ ಟ್ರೋಲ್ ಯಾರೂ ಮಾಡಿರಲಿಲ್ಲ. ನನ್ನ ಜೀವಮಾನದಲ್ಲೇ ಇಷ್ಟು ಕೀಳುಮಟ್ಟದ ಭಾಷೆ ಕೇಳಿರಲಿಲ್ಲ. ಕೆಲವು ಶಬ್ಧಗಳಿಗೆ ನನಗೆ ಅರ್ಥವೇ ಗೊತ್ತಿಲ್ಲ ಎಂದು ಅವರು ನುಡಿದರು.
ನನಗೆ ಸಾಕಷ್ಟು ಮಂದಿ ಕೆಟ್ಟ ಸಂದೇಶ ಕಳುಹಿಸಿದ್ದಾರೆ. ಅದರಲ್ಲಿ ಅತ್ಯಂತ ಕೆಟ್ಟ ಸಂದೇಶ ಕಳುಹಿಸಿದ 43 ಮಂದಿಯ ಪಟ್ಟಿ ಮಾಡಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರನ್ನು ನಾನು ಸಂಪರ್ಕಿಸದೇ ಇದ್ದರೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ರಮ್ಯಾ ಹೇಳಿದರು.