ಬೆಂಗಳೂರಿನ ಆರ್.ಆರ್. ನಗರದಲ್ಲಿ ಸೋಮವಾರ ಕಿರುತೆರೆ ನಟಿ ನಂದಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಸಾವಿನ ಕಾರಣ ಬಯಲಾಗಿದೆ.
ಕೆಂಗೇರಿ ಪೊಲೀಸರು ಡೈರಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ನಂದಿನಿ ಮನಸ್ಸಿನ ನೋವು, ಜೀವನದ ಬಗ್ಗೆ ಹೊಂದಿದ್ದ ಗೊಂದಲಗಳ ಬಗ್ಗೆ ಬರೆದುಕೊಂಡಿದ್ದಾರೆ. ನನಗೆ ಸರ್ಕಾರಿ ಕೆಲಸ ಇಷ್ಟ ಇಲ್ಲ. ನನಗೆ ಆಕ್ಟಿಂಗ್ ತುಂಬಾ ಇಷ್ಟ. ನನ್ನ ಮನಸ್ಸಿಗೆ ಇಷ್ಟವಿಲ್ಲದ ಬದುಕನ್ನು ಬದುಕಲು ಆಗುತ್ತಿಲ್ಲ. ಅದಕ್ಕಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಕೊಟ್ಟೂರು ನಿವಾಸಿಯಾಗಿದ್ದ ನಂದಿನಿ ನಟನೆಗಾಗಿ ಬೆಂಗಳೂರಿಗೆ ಬಂದಿದ್ದರು. ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಧಾರಾವಾಹಿಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಇತ್ತೀಚೆಗೆ ತಮಿಳಿನ ಧಾರಾವಾಹಿ ಯೊಂದರಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದ ನಂದಿನಿ, ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.
ನಂದಿನಿ ಕುಟುಂಬದ ಒತ್ತಡ, ಭವಿಷ್ಯದ ಬಗ್ಗೆ ಗೊಂದಲ ಹಾಗೂ ಇಷ್ಟವಿಲ್ಲದ ಜೀವನದ ದಿಕ್ಕುಗಳು ಅವರನ್ನು ಬಹುವಾಗಿ ಕಾಡುತ್ತಿದ್ದವು ಎನ್ನಲಾಗಿದೆ. ಸರ್ಕಾರಿ ಕೆಲಸದತ್ತ ಒಲವು ತೋರಬೇಕೆಂಬ ನಿರೀಕ್ಷೆ ಮತ್ತು ನಟನೆ ನಡುವೆ ಅವರು ಮಾನಸಿಕ ವಾಗಿ ನೊಂದಿದ್ದರು ಎಂಬುದು ಡೈರಿ ಬರಹಗಳಿಂದ ತಿಳಿದುಬಂದಿದೆ. ಕೆಂಗೇರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಂದಿನಿ ತಂದೆ ಸರ್ಕಾರಿ ಶಿಕ್ಷಕರಾಗಿದ್ದರು. ಮೂರು ವರ್ಷಗಳ ಹಿಂದೆ ನಿಧನರಾಗಿದ್ದು, ತಂದೆಯ ಕೆಲಸವನ್ನು ಮಾಡುವಂತೆ ಕುಟುಂಬಸ್ಥರಿಂದ ಒತ್ತಾಯ ಇತ್ತು. ಟೀಚರ್ ಕೆಲಸ ನಂದಿನಿಗೆ ಇಷ್ಟವಿರಲಿಲ್ಲ. ಅನಾರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿ ದ್ದರು. 2025ರ ಆಗಸ್ಟ್‌ನಿಂದ ಮೈಲಸಂದ್ರದ ಪಿಜಿಯಲ್ಲಿ ವಾಸಿಸುತ್ತಿದ್ದರು. ಭಾನುವಾರ ಗೆಳೆಯ ಪುನೀತ್ ಮನೆಗೆ ಹೋಗಿ ರಾತ್ರಿ ವಾಪಸ್ ಬಂದಿದ್ದರು. ಮತ್ತೆ ಪುನೀತ್ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಪುನೀತ್, ಪಿಜಿಯ ಮ್ಯಾನೇಜರ್‌ಗೆ ತಿಳಿಸಿದ್ದರು. ಪಿಜಿ ಮ್ಯಾನೇಜರ್ ಹಾಗೂ ಸಿಬ್ಬಂದಿ ನಂದಿನಿ ಕೊಠಡಿ ಬಳಿ ತೆರಳಿ ನೋಡಿದಾಗ ವೇಲ್‌ನಿಂದ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು ಎಂದು ಪೊಲೀಸರು ತಿಳಿಸಿ ದ್ದಾರೆ.


