ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ನಿರ್ಮಾಪಕ ಹೇಮಂತ್ ಕುಮಾರ್ ಅವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ರಿಚ್ಚಿ ಸಿನಿಮಾದ ಶೂಟಿಂಗ್ ವೇಳೆ ನಿರ್ಮಾಪಕ ಹೇಮಂತ್ ಕುಮಾರ್ ಲೈಂಗಿಕ ಕಿರುಕುಳ ನೀಡಿರುವುದಾಗಿ ನಟಿಯೊಬ್ಬರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೇಮಂತ್ ಕುಮಾರ್ ಅವರನ್ನು ಬಂಧಿಸಿದ್ದಾರೆ. 2022 ರಲ್ಲಿ ರಿಚ್ಚಿ ಹೆಸರಿನಲ್ಲಿ ಸಿನಿಮಾ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡು, ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಎರಡು ಲಕ್ಷ ರೂ. ಒಪ್ಪಂದವಾಗಿತ್ತು. ಮುಂಗಡ ಹಣವಾಗಿ ಹೇಮಂತ್ ಕುಮಾರ್ 60 ಸಾವಿರ ರೂ. ನೀಡಿದ್ದರು ಎಂದು ನಟಿ ತಿಳಿಸಿದ್ದಾರೆ.
ಸಿನಿಮಾದ ಶೂಟಿಂಗ್ ವೇಳೆ ಅರೆಬರೆ ಬಟ್ಟೆ ಧರಿಸುವಂತೆ ಒತ್ತಾಯ ಮಾಡುತ್ತಿದ್ದರು. ಶೂಟಿಂಗ್ ಮುಗಿದ ಮೇಲೆ ಪ್ರಚಾರದ ನೆಪದಲ್ಲಿ ಖಾಸಗಿ ಹೋಟೆಲಿಗೆ ಒಬ್ಬಳೇ ಬರುವಂತೆ ಕಿರುಕುಳ ನೀಡಿದ್ದರು. ಒಪ್ಪದೆ ಇದ್ದಾಗ ಚಿತ್ರದಲ್ಲಿ ಸೆನ್ಸಾರ್ ಆಗದ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ನನ್ನ ತಾಯಿಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಟಿ ದೂರಿನಲ್ಲಿ ವಿವರಿಸಿದ್ದರು.
ಹೆಣ್ಣುಮಗುವೆಂದು ಪತಿಯ ಕಿರುಕುಳ: ಪತ್ನಿ ಆತ್ಮಹತ್ಯೆ
ಹೆಣ್ಣು ಮಗು ಹುಟ್ಟಿದ್ದರಿಂದ ಮನನೊಂದಿದ್ದ ಪತಿ ಮತ್ತು ಆತನ ಸಹೋದರನ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನ ಲಗ್ಗೆರೆ ಮುನೇಶ್ವರ ಬ್ಲಾಕ್ ಬಳಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗಂಡ ಮತ್ತು ಆತನ ಸಹೋದರ ಕೊಲೆ ಮಾಡಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಅರಸೀಕೆರೆ ಮೂಲದ ರಕ್ಷಿತಾ (26) ಆತ್ಮಹತ್ಯೆ ಮಡಿಕೊಂಡವರು. ಧನಲಕ್ಷ್ಮಿ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿರುವ ರವೀಶ್ ಎಂಬಾತನನ್ನು 4 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ 3 ವರ್ಷದ ಹೆಣ್ಣು ಮಗುವಿದೆ. ಮಗು ಹುಟ್ಟಿದಾಗ ಹೆಣ್ಣು ಮಗು ಎಂದು ಕೋಪಗೊಂಡು ಆಸ್ಪತ್ರೆ ಬಿಲ್ ಕಟ್ಟಲು ಕೂಡ ನಿರಾಕರಿಸಿದ್ದ. ಸಂಬಂಧಿಕರು ರಾಜಿ ಸಂಧಾನ ಮಾಡಿ ಹೆಂಡತಿಯನ್ನು ಗಂಡನ ಮನೆಗೆ ಕಳುಹಿಸಿದ್ದರು. ಅಂದಿನಿಂದ ಪ್ರತಿದಿನ ಗಲಾಟೆ ಮಾಡಿ ಹಲ್ಲೆ ಮಾಡುವುದು ನಡೆಯುತ್ತಿತ್ತು.
ವಾರದ ಹಿಂದೆ ರವೀಶ್ ಮಗುವಿನ ಕಿವಿಗೆ ಸುಟ್ಟಿದ್ದ ಎನ್ನಲಾಗಿದೆ. ರವೀಶ್ ಮತ್ತು ಆತನ ಸೋದರ ರಿಕೊಂಡು ರಕ್ಷಿತಾ ಜೊತೆ ಗಲಾಟೆ ಮಾಡಿದ್ದರು. ಮನನೊಂದ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಕ್ಷಿತಾ ತಂದೆ ತಿಮ್ಮರಾಜು ಅವರ ಕರೆ ಸ್ವೀಕರಿಸದೇ ಇದ್ದಾಗ ಅವರು ಲಗ್ಗೆರೆಯಲ್ಲಿರುವ ಮನೆಗೆ ಬಂದಿದ್ದಾರೆ. ಮನೆಯ ಬಾಗಿಲು ಹೊರಗಿನಿಂದ ಲಾಕ್ ಮಾಡಲಾಗಿತ್ತು. ಮನೆ ಮಾಲೀಕರ ಬಳಿ ಕೀ ಪಡೆದು ಬಾಗಿಲು ತೆರೆದಾಗ ರಕ್ಷಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.