ಟ್ಯೂಷನ್ ಗೆ ಹೋಗು ಎಂದು ತಾಯಿ ಬೈದಿದ್ದಕ್ಕೆ ಹಿಂದಿ ಮತ್ತು ಗುಜರಾತಿ ಕಿರುತೆರೆ ನಟನ 14 ವರ್ಷದ ಪುತ್ರ 50ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಕಂಡಿವಾಲಿಯ ಅಂಪಾರ್ಟ್ ಮೆಂಟ್ ನ 51ನೇ ಅಂತಸ್ತಿನಲ್ಲಿ ಕುಟುಂಬ ವಾಸವಾಗಿತ್ತು.ಮನೆಯಿಂದ ಕೆಲವು ಮಹಡಿ ಇಳಿದ ನಂತರ ಬಾಲಕ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಯಿ ಸಂಜೆ 7 ಗಂಟೆ ಸುಮಾರಿಗೆ ಟ್ಯೂಷನ್ ಗೆ ಹೋಗುವಂತೆ ಪದೇಪದೆ ಹೇಳಿದರೂ ಬಾಲಕ ಕಿವಿ ಮೇಲೆ ಹಾಕಿಕೊಂಡಿಲ್ಲ. ಇದರಿಂದ ತಾಯಿ ಟ್ಯೂಷನ್ ಗೆ ಹೋಗುವಂತೆ ಒತ್ತಾಯಿಸಿದಾಗ ಮನೆಯಿಂದ ಹೊರಗೆ ಬಾಲಕ ಹೊರಟಿದ್ದಾನೆ.ಬಾಲಕ ಮನೆಯಿಂದ ಹೊರಟ ಕೆಲವೇ ನಿಮಿಷಗಳ ನಂತರ ಅಪಾರ್ಟ್ ಮೆಂಟ್ ಸೆಕ್ಯೂರೆಟಿ ಗಾರ್ಡ್ ಮನೆಗೆ ಬಂದು ಈ ಆಘಾತಕಾರಿ ವಿಷಯ ತಿಳಿಸಿದ್ದಾನೆ. ಹೆತ್ತವರು ಕೂಡಲೇ ಸ್ಥಳಕ್ಕೆ ಹೋದಾಗ ಮಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಆಘಾತಕ್ಕೆ ಒಳಗಾಗಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ನಡೆಸುತ್ತಿದ್ದಾರೆ. ಬಾಲಕ ಎಷ್ಟನೇ ಮಹಡಿ ಮೇಲಿಂದ ಬಿದ್ದಿದ್ದಾನೆ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ.