ಕನ್ನಡ ಚಿತ್ರಪ್ರೇಮಿಗಳ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಬ್ರಮದಿಂದ ಆಚರಿಸುತ್ತಿದ್ದಾರೆ. ಪುನೀತ್ ಇಂದು ಜೊತೆಗಿರದ ಜೀವ ಆಗಿದ್ದರೂ ಅಭಿಮಾನಿಗಳ ಪ್ರೀತಿ, ವಿಶ್ವಾಸ, ಹುಟ್ಟುಹಬ್ಬ ಆಚರಿಸುವ ಉತ್ಸಾಹ ಹೆಚ್ಚುತ್ತಲೇ ಇದೆ.
ಅಭಿಮಾನಿಗಳು ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಬಳಿ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ. ಅವರ 50ನೇ ವರ್ಷದ ಹುಟ್ಟುಹಬ್ಬವನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಅಪ್ಪು ಸಮಾಧಿ ಬಳಿ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಮ್ಮುಖ ಪುನೀತ್ ಕುಟುಂಬಸ್ಥರು ಪೂಜೆ ನೆರವೇರಿಸಿದರು. ಬಳಿಕ ಸಮಾಧಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ನಾನಾ ಊರುಗಳಿಂದ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ರಾತ್ರಿ 12 ಗಂಟೆಯಿಂದ ಶುರುವಾದ ಅಪ್ಪು ಹುಟ್ಟುಹಬ್ಬ ಆಚರಣೆಯನ್ನು ಇಂದು ಇಡೀ ದಿನ ಅಭಿಮಾನಿಗಳು ಮುಂದುವರಿಸಲಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಂತೂ ಅಭಿಮಾನಿಗಳು ಸಮಾವೇಶಗೊಂಡಿದ್ದಾರೆ. ಇಲ್ಲಿ ಅನ್ನದಾನ, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಯಲಿದೆ. ಪುನೀತ್ ಕುಟುಂಬಸ್ಥರ ಜೊತೆ ಆಪ್ತರು ನಟ-ನಟಿಯರು ಹುಟ್ಟುಹಬ್ಬಕ್ಕೆ ಕಳೆ ತುಂಬಿದ್ದಾರೆ.