ಗ್ರೇಟರ್ ಬೆಂಗಳೂರು ಯೋಜನೆಯಡಿ ಹೆಬ್ಬಾಳದಿಂದ ಸಿಲ್ಕ್ಬೋರ್ಡ್ವರೆಗೂ ಸುರಂಗ ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ಟೆಂಡರ್ ರದ್ದುಗೊಳಿಸುವಂತೆ ಕೋರಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ)ಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಉದ್ದೇಶಿತ ಯೋಜನೆಗಾಗಿ ಯಾವುದೇ ಮರಗಳನ್ನು ಕಡಿಯವುದಕ್ಕೆ ಅವಕಾಶ ಇರುವುದಿಲ್ಲ ಎಂದು ನ್ಯಾಯಪೀಠ ಇದೇ ವೇಳೆ ಮೌಖಿಕವಾಗಿ ನಿರ್ದೇಶನ ನೀಡಿದೆ.
ಚಲನಚಿತ್ರ ಕಲಾವಿದ ಪ್ರಕಾಶ್ ಬೆಳವಾಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರಿದ್ದ ವಿಭಾಗಿಯ ಪೀಠ ನೋಟಿಸ್ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಸಂಸದ ತೇಜಸ್ವಿ ಸೂರ್ಯ, ಉದ್ದೇಶಿತ ಸುರಂಗ ಮಾರ್ಗಕ್ಕಾಗಿ ನಗರದ ಶ್ವಾಸಕೋಶದಂತಿರುವ ಲಾಲ್ಬಾಗ್ನಲ್ಲಿ 6.5 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಉದ್ದೇಶಿಸಲಾಗಿದೆ. ಇದೇ ಕಾರಣದಿಂದ ಲಾಲ್ಬಾಗ್ನ ಈ ಭಾಗದಲ್ಲಿ ಈಗಾಗಲೇ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಹೊರಡಿಸಿರುವ ಡಿಪಿಆರ್ ಪ್ರಕಾರ 3 ಸಾವಿರ ವರ್ಷಗಳ ಕಾಲದಿಂದ ನೈಸರ್ಗಿಕವಾಗಿ ರಚನೆಯಾಗಿರುವ ಬೃಹದಾಕಾರದ ಬಂಡೆಯಿದ್ದು, ಇದನ್ನು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವನ್ನಾಗಿ ಘೋಷಣೆ ಮಾಡಲಾಗಿದೆ. ಯೋಜನೆಯಿಂದ ಈ ಬಂಡೆಗೆ ಹಾನಿಯಾಗುವ ಸಂಭವವಿದೆ ಎಂದು ಪೀಠಕ್ಕೆ ವಿವರಿಸಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಡಾ. ಆದಿಕೇಶವಲು ಮತ್ತಿತರರು ಸಲ್ಲಿಸಿದ್ದ ಅರ್ಜಿದಾರರ ಪರ ವಕೀಲರು, ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿದಂತೆ ನಗರದ ಐತಿಹಾಸಿಕ ಕೇಂದ್ರವಾಗಿರುವ ಲಾಲ್ಬಾಗ್ನಲ್ಲಿ 6 ಎಕರೆ ಜಮೀನನ್ನು ಯೋಜನೆಗೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಗುರುತಿಸಲಾಗಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಮರಗಳು ಅಪಾಯದಂಚಿನಲ್ಲಿವೆ. ಮರಗಳನ್ನು ಕಡಿಯುವುದಕ್ಕೆ ಯಾವ ಕಾರಣದಿಂದ ಮುಂದಾಗಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನ್ಯಾಯಾಲಯದ ಅನುಮತಿಯಿಲ್ಲದೇ ಮರಗಳನ್ನು ಕಡಿಯುದಂತೆ ಆದೇಶ ನೀಡಬೇಕು ಎಂದು ಪೀಠಕ್ಕೆ ವಿವರಿಸಿದರು.
ಅರ್ಜಿಯ ಸಂಬಂಧ ಪರಿಶೀಲಿಸಬೇಕಾಗಿದೆ. ಲಾಲ್ಬಾಗ್ನಲ್ಲಿ ಮರಗಳನ್ನು ಕಡಿಯುವ ಸಂಬಂಧ ಯಾವುದೇ ಪ್ರಸ್ತಾಪವಿದೆಯೇ ಎಂದು ಕೋರ್ಟ್ ಪ್ರಶ್ನಿಸಿತು. ಈ ವೇಳೆ ಸರ್ಕಾರದ ಪರ ವಕೀಲರು, ಆ ರೀತಿಯ ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದರು. ಅಲ್ಲದೇ, ಈ ಅಂಶವನ್ನು ಅಡ್ವೋಕೇಟ್ ಜನರಲ್ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಮಧ್ಯಾಹ್ನದ ವೇಳೆಗೆ ಮರಗಳ ಕಡಿಯುವುದಕ್ಕೆ ಸಂಬಂಧಿಸಿ ಮಾಹಿತಿ ಪಡೆಯಲು ಸೂಚನೆ ನೀಡಿತು. ಸರ್ಕಾರದ ಪರ ವಕೀಲರು, ಇಂದು ನಾಲ್ಕನೇ ಶನಿವಾರವಾದ ಕಾರಣದಿಂದ ಎಲ್ಲ ಅಧಿಕಾರಿಗಳು ರಜೆಯಲ್ಲಿದ್ದಾರೆ. ಆದ್ದರಿಂದ ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ಪೀಠ, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ ?
ಬೆಂಗಳೂರು ನಗರದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೂ ಉತ್ತರ – ದಕ್ಷಿಣ ಮಾರ್ಗವಾಗಿ ಸುರಂಗ ರಸ್ತೆ ಮಾರ್ಗವನ್ನು 19,000 ಕೋಟಿ ರೂ.ಗಳ ವೆಚ್ಚದಲ್ಲಿ ಸಂವಿಧಾನ ಬಾಹಿರವಾಗಿ ನಿರ್ಮಾಣಕ್ಕೆ ಮುಂದಾಗಿದೆ. ಅಂತರ್ಜಾಲದ ಹರಿವಿಗೆ ತೊಂದರೆಯಾಗಲಿದೆ. ಈ ಯೋಜನೆ ನಗರದಲ್ಲಿನ ನೂರಾರು ಕೊಳವೆ ಬಾವಿಗಳು, ಜಲಚರಗಳು, ಹೆಬ್ಬಾಳ ಮತ್ತು ನಾಗವಾರ ಕೆರೆಗಳಿಗೆ ನೀರು ಹರಿಯುವ ಮಾರ್ಗಗಳಿಗೆ ಹಾನಿಯಾಗಲಿದೆ. ಲಾಲ್ ಬಾಗ್ನಲ್ಲಿ 3 ಸಾವಿರ ವರ್ಷಗಳ ಹಿಂದೆ ನೈಸರ್ಗಿಕವಾಗಿ ರಚನೆಯಾಗಿರುವ ಬೃಹದಾಕರಾದ ಬಂಡೆಗೆ ಹಾನಿಯಾಗಲಿದೆ.
ಯೋಜನೆಗೆ ಪ್ರತಿಯೊಂದು ಕಿಲೋಮೀಟರ್ಗೆ 1 ಸಾವಿರ ಕೋಟಿ ವೆಚ್ಚವಾಗಲಿದೆ. ಈ ಮಾರ್ಗದಲ್ಲಿ ದ್ವಿಚಕ್ರವಾಹನಗಳು ಮತ್ತು ಆಟೋ ರಿಕ್ಷಾಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ದ್ವಿಚಕ್ರ ಮತ್ತು ನಾಲ್ಕು ಚಕ್ರವಾಹನಗಳ ನಡುವೆ ಅಸಮಾನತೆಯುಂಟು ಮಾಡಲಿದ್ದು, ಸಂವಿಧಾನದ ಪರಿಚ್ಚೇದ 14ರ ಉಲ್ಲಂಘನೆಯಾದಂತಾಗಲಿದೆ. ಆದ್ದರಿಂದ ಈ ಯೋಜನೆ ಸಂವಿಧಾನ ಬಾಹಿರವಾಗಿದ್ದು, ಯೋಜನೆ ಮುಂದುವರೆಯುವುದಕ್ಕೆ ಅವಕಾಶ ನೀಡಬಾರದು. ಜೊತೆಗೆ, ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ನಿರ್ಧಾರ ತೆಗೆದುಕೊಂಡಿರುವ ನಡಾವಳಿಗಳನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.


