`ತಿಥಿ’ ಖ್ಯಾತಿಯ ನಟ ಗಡ್ಡಪ್ಪ ಎಂದೇ ಖ್ಯಾತರಾದ ಚನ್ನೇಗೌಡ ಅನಾರೋಗ್ಯದಿಂದ ನಿಧನರಾಗಿದ್ದು, ಅವರಿಗೆ 89 ವರ್ಷ ವಯಸ್ಸಾಗಿತ್ತು.
ಮಂಡ್ಯ ಜಿಲ್ಲೆಯ ನೊದೆ ಕೊಪ್ಪಲು ಗ್ರಾಮದ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಗಡ್ಡಪ್ಪ ಅಂತ್ಯಕ್ರಿಯೆ ನಡೆದಿದೆ.
ಅಸ್ತಮಾ ಜೊತೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಡ್ಡಪ್ಪ ತಿಂಗಳ ಹಿಂದಷ್ಟೇ ಮನೆಯಲ್ಲೇ ಎಡವಿ ಬಿದ್ದು ಸೊಂಟಕ್ಕೆ ಬಲವಾಗಿ ಪೆಟ್ಟು ಮಾಡಿಕೊಂಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಹಲವು ಪ್ರಶಸ್ತಿಗಳನ್ನ ಬಾಚಿಕೊಂಡ `ತಿಥಿ’ಚಿತ್ರದಲ್ಲಿ ಗಡ್ಡಪ್ಪ ಪಾತ್ರ ಖ್ಯಾತವಾಗಿದ್ದು, ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಗಡ್ಡಪ್ಪ ಎಂದೇ ಖ್ಯಾತಿ ಪಡೆದಿದ್ದರು. ಈ ಪಾತ್ರದ ಮೂಲಕವೇ ತರ್ಲೆ ವಿಲೇಜ್, ಜಾನಿ ಮೇರಾ ನಾವ್, ಹಳ್ಳಿ ಪಂಚಾಯಿತಿ ಸೇರಿದಂತೆ ಒಟ್ಟೂ 10 ಚಿತ್ರಗಳಲ್ಲಿ ಅವರು ನಟಿಸಿದ್ದರು.
ಬಡತನದಲ್ಲೇ ಹುಟ್ಟಿ ಬೆಳೆದ ಗಡ್ಡಪ್ಪಗೆ ತಿಥಿ ಚಿತ್ರದ ಬಳಿಕ ಬದುಕು ಸುಧಾರಿಸಿತ್ತು, ಇಳಿ ವಯಸ್ಸಿನಲ್ಲಿ ಅಭಿನಯಿಸಿ ಬಂದ ಹಣದಿಂದ ಇಡೀ ಕುಟುಂಬವನ್ನ ಗಡ್ಡಪ್ಪ ಸಾಕುತ್ತಿದ್ದರು. ಇದೀಗ ಹಿರಿಜೀವ ಕಳೆದುಕೊಂಡು ಕುಟುಂಬಸ್ಥರು ಕಂಗಾಲಾಗಿದ್ದಾರೆ.


