ಮಲಯಾಳಂ ಸಿನಿಮಾರಂಗದ ಖ್ಯಾತ ನಟ ಮೋಹನ್‌ಲಾಲ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ 2023ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಮೋಹನ್‌ಲಾಲ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸೆಪ್ಟೆಂಬರ್ 23ರಂದು ನಡೆಯಲಿರುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮೋಹನ್‌ಲಾಲ್ ಮಲಯಾಳಂ ಸಿನಿಮಾದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಖ್ಯಾತರಾದವರು. 1978ರಲ್ಲಿ ತಿರನೋಟ್ಟಂ ಚಿತ್ರದ ಮೂಲಕ ವೃತ್ತಿಜೀವನಕ್ಕೆ ಕಾಲಿಟ್ಟ ಮೋಹನ್‌ಲಾಲ್, ಮಂಜಿಲ್ ವಿರಿಂಜಾ ಪೂಕ್ಕಾಲ್ ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಮೋಹನ್‌ಲಾಲ್ ನಿರ್ದೇಶಕ, ನಿರ್ಮಾಪಕ, ಗಾಯಕ ಮತ್ತು ರಂಗಕಲಾವಿದರಾಗಿಯೂ ಕಾರ್ಯ ನಿರ್ವಹಿಸಿದವರು.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರ ಸ್ಮರಣಾರ್ಥವಾಗಿ ನೀಡಲಾಗುವ ಅತ್ಯುನ್ನತ ಗೌರವ. ಚಿತ್ರರಂಗಕ್ಕೆ ಅಸಾಧಾರಣ ಕೊಡುಗೆ ನೀಡಿದ ಕಲಾವಿದರನ್ನು ಗುರುತಿಸಿ ಇದನ್ನು ನೀಡಲಾಗುತ್ತಿದೆ.