ನಟ ಕಮಲ್ ಹಾಸನ್ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ಜೂನ್ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ತಮಿಳುನಾಡಿನ ಡಿಎಂಕೆ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಪಕ್ಷದ ಮೈತ್ರಿ ಕೂಟದ ಕಮಲ್ ಹಾಸನ್ ಹೆಸರು ಕೂಡ ಇದೆ.
ಡಿಎಂಕೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸಲ್ಮಾ ಪಿ. ವಿಲ್ಸನ್, ಎಸ್.ಆರ್. ಶಿವಲಿಂಗಂ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳಾಗಿ ಆಯ್ಕೆ ಆಗಿದ್ದಾರೆ. ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯಂ ಪಕ್ಷಕ್ಕೆ ಒಂದು ಸ್ಥಾನ ನೀಡಲಾಗಿದೆ. ಈ ಪಕ್ಷದಿಂದ ಕಮಲ್ ಹಾಸನ್ ಅವರನ್ನು ಆಯ್ಕೆ ಮಾಡಿರೋದಾಗಿ ಡಿಎಂಕೆ ಹೇಳಿದೆ.
ತಮಿಳುನಾಡಿನ ಆರು ರಾಜ್ಯಸಭಾ ಸದಸ್ಯರು ಜುಲೈನಲ್ಲಿ ನಿವೃತ್ತರಾಗಲಿದ್ದಾರೆ. ರಾಜ್ಯ ಸಭೆಯಲ್ಲಿ ಮಿತ್ರಪಕ್ಷಗಳ ಬಲದ ಆಧಾರದ ಮೇಲೆ 6 ಸ್ಥಾನಗಳಲ್ಲಿ ಡಿಎಂಕೆ ನಿರಾಯಾಸವಾಗಿ 4 ಸ್ಥಾನಗಳನ್ನು ಗೆಲ್ಲಬಹುದು. ಪ್ರಮುಖ ವಿರೋಧ ಪಕ್ಷ ಎನಿಸಿಕೊಂಡಿರುವ ಎಐಎಡಿಎಂಕೆ 2 ಸ್ಥಾನಗಳನ್ನು ಗೆಲ್ಲಬಹುದು. ಎಐಎಡಿಎಂಕೆಗೆ ಬಿಜೆಪಿ ಸೇರಿದಂತೆ ಮಿತ್ರಪಕ್ಷಗಳ ಬೆಂಬಲವಿದೆ.
‘ಥಗ್ ಲೈಫ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್, ಶಿವರಾಜ್ ಕುಮಾರ್ ಅವರನ್ನು ಉಲ್ಲೇಖಿಸಿ ಮಾತನಾಡುತ್ತ, ಇದು ನನ್ನ ಕುಟುಂಬ. ಅದಕ್ಕಾಗಿಯೇ ಅವರು (ಶಿವರಾಜ್ಕುಮಾರ್) ಇಲ್ಲಿಗೆ ಬಂದಿದ್ದಾರೆ. ನಿಮ್ಮ ಭಾಷೆ (ಕನ್ನಡ) ಕೂಡ ತಮಿಳಿನಿಂದ ಹುಟ್ಟಿಕೊಂಡಿದೆ ಎಂದು ಹೇಳಿದ್ದು, ಈ ಹೇಳಿಕೆಗೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅವರು ತಕ್ಷಣ ಕ್ಷಮೆ ಯಾಚಿಸಬೇಕೆಂದು ಕನ್ನಡಿಗರು ಒತ್ತಾಯಿಸಿದ್ದಾರೆ.