ಕಲಾ ನಿರ್ದೇಶಕ ದಿನೇಶ್ ಮಂಗಳೂರು ಇಂದು ಬೆಳಗಿನ ಜಾವ ಕುಂದಾಪುರದ ಮನೆಯಲ್ಲಿ ನಿಧನರಾದರು. ಆ ದಿನಗಳು, ಕೆಜಿಎಫ್, ಉಳಿದವರು ಕಂಡಂತೆ, ಕಿಚ್ಚ, ಕಿರಿಕ್ ಪಾರ್ಟಿ, ರಿಕ್ಕಿ, ಚಾರ್ಲಿ 777 ಸೇರಿದಂತೆ ಹಲವು ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ನಟಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ‘ಕಾಂತಾರ’ ಚಿತ್ರದ ಶೂಟಿಂಗ್ ವೇಳೆ ಅವರಿಗೆ ಪಾರ್ಶ್ವವಾಯು ಆಗಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ವಾರದ ಹಿಂದೆ ಮತ್ತೆ ಅಸ್ವಸ್ಥರಾಗಿದ್ದರು. ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
” ಕಲಾ ನಿರ್ದೇಶಕ, ಕಲಾವಿದ, ನಿರ್ಮಾಪಕ, ಸನ್ಮಿತ್ರ ದಿನೇಶ್ ಮಂಗ್ಳುರ್ ಇನ್ನಿಲ್ಲ. ಹೋಗಿ ಬಾ ಮಿತ್ರಾ’ ಎಂದು ನಿರ್ದೇಶಕ ಪಿ. ಶೇಷಾದ್ರಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಕನ್ನಡ ಕಲಾವಿದರು, ಅಭಿಮಾನಿಗಳು ದಿನೇಶ್ ಮಂಗಳೂರು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇಂದು ಸಂಜೆ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದ್ದು, ನಾಳೆ ಸುಮನಹಳ್ಳಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.