ಕೊಪ್ಪಳ: ಬಳ್ಳಾರಿಯ ಬ್ಯಾನರ್ ಗಲಾಟೆ ಮಾಸುವ ಮುನ್ನವೇ ಕೊಪ್ಪಳದಲ್ಲಿ ಅಂಥದ್ದೇ ಹೈಡ್ರಾಮಾ ಸೋಮವಾರ ನಡೆದಿದೆ. ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಕಾಮಗಾರಿಯ ಶಿಲಾನ್ಯಾಸ ಮತ್ತು ಭೂಮಿಪೂಜೆ ವೇಳೆ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಿಲ್ಲ ಎನ್ನುವ ಆರೋಪ, ಕೇಂದ್ರದ ರಾಜ್ಯ ರೈಲ್ವೆ ಸಚಿವರ ಸಮ್ಮುಖದಲ್ಲೇ ಕುರ್ಚಿ ತೂರಾಡಿದ ಕೈ ಕಾರ್ಯಕರ್ತರು, ಸಚಿವರ ಕಾರು ಅಡ್ಡಗಟ್ಟಿ ಧರಣಿಗಿಳಿದು ಹೈಡ್ರಾಮಾ ಸೃಷ್ಟಿಯಾಯಿತು.
ಕೊಪ್ಪಳ ತಾಲೂಕಿನ ಹಿಟ್ನಾಳದಲ್ಲಿ ಗಿಣಗೇರಾ ಮತ್ತು ಮುನಿರಾಬಾದ್ ಮಾರ್ಗಕ್ಕಾಗಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲೆಯ ಅಧಿಕಾರಿಗಳು ಹಾಗೂ ರೈಲ್ವೆ ಅಧಿಕಾರಿಗಳು ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲಿಸದೇ ರಾಜ್ಯದ ಸಚಿವ ಹಾಗೂ ಕನಕಗಿರಿ ಶಾಸಕ ಶಿವರಾಜ ತಂಗಡಗಿ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ ಹೆಸರನ್ನು ಬಳಸಿಲ್ಲ ಎನ್ನುವುದು ಈ ರಾದ್ಧಾಂತಕ್ಕೆ ಕಾರಣವಾಯಿತು.
ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಸಂಸದ ರಾಜಶೇಖರ ಹಿಟ್ನಾಳ ಅವರ ಸ್ವಗ್ರಾಮ ಹಿಟ್ನಾಳ. ತಮ್ಮೂರಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಜನಪ್ರತಿನಿಧಿಯಾಗಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ ಎನ್ನುವುದು ಆಕ್ರೋಶ ಸ್ಪೋಟಗೊಳ್ಳಲು ದಾರಿ ಮಾಡಿಕೊಟ್ಟಂತಾಯಿತು. ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಎದುರು ತಮ್ಮ ಬೆಂಬಲಿಗರಿಂದ ಶಕ್ತಿ ಪ್ರದರ್ಶನ ಮಾಡುವ ಇರಾದೆ ಹಿಟ್ನಾಳ ಸಹೋದರರಿಗೆ ಇರದಿದ್ದರೂ ಶಿಷ್ಟಾಚಾರ ಪಾಲಿಸದಿರುವುದು ಮುಜುಗುರ ತಂದಿತು.
ಕಾರ್ಯಕ್ರಮದ ಸ್ಥಳಕ್ಕೆ ಮೊದಲು ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ ಹಿಟ್ನಾಳ ಬ್ರದರ್ಸ್ ಸ್ಥಳೀಯ ಅಧಿಕಾರಿಗಳನ್ನು ಶಿಷ್ಟಾಚಾರ ಪಾಲನೆ ಮಾಡದಿರುವುದಕ್ಕೆ ತರಾಟೆಗೆ ಒಳಪಡಿಸುವ ವೇಳೆ ಕೇಂದ್ರದ ಸಚಿವ ವಿ.ಸೋಮಣ್ಣ ಆಗಮಿಸಿದರು. ತಂಗಡಗಿ ಏರುದನಿಯಲ್ಲೇ ಸಚಿವರ ವಿರುದ್ಧ ದೂರಿದರು. ಸಮಾಧಾನ ಮಾಡಲು ಸಚಿವ ಸೋಮಣ್ಣ ಸಾಕಷ್ಟು ಪ್ರಯತ್ನಿಸಿದರೂ ಆಕ್ರೋಶ ತಣ್ಣಗಾಗದ ಪರಿಣಾಮ ಭೂಮಿಪೂಜೆಗೆ ಮುಂದಾದರು. ಆಗ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಕುರ್ಚಿಗಳನ್ನು ಸಚಿವರ ಸಮ್ಮುಖದಲ್ಲೇ ತೂರಾಡಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಶಿಲಾನ್ಯಾಸದ ವೇದಿಕೆ ಏರಿ ಸ್ಥಳೀಯ ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಬರುವಂತೆ ಕೇಂದ್ರ ಸಚಿವ ಸೋಮಣ್ಣ ಎಷ್ಟು ಬಾರಿ ಆಹ್ವಾನಿಸಿದರೂ ಕೈ ನಾಯಕರನ್ನು ವೇದಿಕೆ ಹತ್ತಲು ಕಾರ್ಯಕರ್ತರು ಅಡ್ಡಿಪಡಿಸಿದರು. ಆಮಂತ್ರಣ ಪತ್ರಿಕೆಯಲ್ಲಿ ಅಚಾತುರ್ಯ ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಸೋಮಣ್ಣ, ಶಿಲಾನ್ಯಾಸದಲ್ಲಿ ಅವರ ಹೆಸರು ಇರುವುದನ್ನು ತೋರಿಸಿದರೂ ಕೋಪದ ತಾಪದಲ್ಲಿದ್ದ ಕೈ ನಾಯಕರು ಅತ್ತ ಗಮನ ಹರಿಸಲಿಲ್ಲ. ಸುಮಾರು ಐದು ನಿಮಿಷದಲ್ಲಿ ಶಿಲಾನ್ಯಾಸ ನೆರವೇರಿಸಿ, ಸಚಿವ ಸೋಮಣ್ಣ ಕಾರು ಹತ್ತುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿ ಕಾರಿನ ಮುಂದೆ ಧರಣಿಗೆ ಮುಂದಾದರು. ಪೊಲೀಸ್ ಅಧಿಕಾರಿಗಳು ಮತ್ತು ರೈಲ್ವೆ ಸಿಬ್ಬಂದಿ ಧರಣಿ ನಡೆಸುವುದನ್ನು ತಡೆದರು.


