ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿ 6 ಮಂದಿಯನ್ನು ಆಂಧ್ರಪ್ರದೇಶದ ನರ್ಸಮ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. 14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿವಾದವೇ ಕೃತ್ಯಕ್ಕೆ ಕಾರಣ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಮಾಧವ ರೆಡ್ಡಿಯು ಕೊಲೆಯಾದ ವೀರಸ್ವಾಮಿ ರೆಡ್ಡಿ ಅವರ ಮಾಜಿ ಉದ್ಯಮ ಪಾಲುದಾರ. ಮಾಧವರೆಡ್ಡಿ, ಅನಿಲ್ ರೆಡ್ಡಿ, ನಾಗಿರೆಡ್ಡಿ, ಚಿನ್ನಾರೆಡ್ಡಿ ಅಲಿಯಾಸ್ ಇಂದ್ರಸೇನಾ ರೆಡ್ಡಿ, ಗೋಪಿ ರೆಡ್ಡಿ ಮತ್ತು ರಘುರಾಮ್ ರೆಡ್ಡಿ ಇತರ ಬಂಧಿತ ಆರೋಪಿಗಳು.
ಮಾಧವರೆಡ್ಡಿ ಹಾಗೂ ವೀರಸ್ವಾಮಿ ರೆಡ್ಡಿ ಇಬ್ಬರೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. 14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿಚಾರದಲ್ಲಿ ಇಬ್ಬರ ನಡುವೆ ತೀವ್ರ ವೈಷಮ್ಯ ಬೆಳೆದಿತ್ತು. ವೀರಸ್ವಾಮಿ ತನಗೆ ಹಣಕಾಸಿನ ವಿಚಾರದಲ್ಲಿ ವಂಚನೆ ಮಾಡಿದ್ದಾನೆ ಎಂಬುದು ಮಾಧವ ರೆಡ್ಡಿಯ ಆರೋಪವಾಗಿತ್ತು. ಇದೇ ದ್ವೇಷಕ್ಕೆ ತನ್ನ ಮಾಜಿ ಪಾಲುದಾರನನ್ನೇ ಮುಗಿಸಲು ಮಾಧವ ರೆಡ್ಡಿ ಸಂಚು ರೂಪಿಸಿದ್ದನು.
ಮೊದಲಿಗೆ ವೀರಸ್ವಾಮಿ ರೆಡ್ಡಿ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಅವರನ್ನು ನ್ಯಾಯಾಲಯದ ವಿಚಾರಣೆಗೆ ಬರುವಂತೆ ಮಾಡಿದ್ದರು. ಬಳಿಕ ಪ್ರಶಾಂತ್ ರೆಡ್ಡಿ ಬಳಿ ರಾಜಿ ಸಂಧಾನ ಮಾಡಿಸುವುದಾಗಿ ನಂಬಿಸಿ, ತಂದೆ-ಮಗ ಇಬ್ಬರನ್ನೂ ನರ್ಸಮ್‌ಪೇಟೆ ಬಳಿಗೆ ಬರುವಂತೆ ಮಾಡಿದ್ದರು.
ಅಲ್ಲಿಗೆ ಬಂದ ವೀರಸ್ವಾಮಿ ರೆಡ್ಡಿ ಮತ್ತು ಪ್ರಶಾಂತ್ ರೆಡ್ಡಿ ಅವರನ್ನು ಅಪಹರಿಸಿ, ಮಾಧವರೆಡ್ಡಿ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.