ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಪೊಲೀಸರುಇಬ್ಬರನ್ನು ಬಂಧಿಸಿದ್ದಾರೆ. ಗುರುಮೂರ್ತಿ, ಗೋಪಾಲಕೃಷ್ಣ ಬಂಧಿತರು.
ಬುಧವಾರ ರಾತ್ರಿ ಅರಕೆರೆ ಶಾಂತಿನಿಕೇತನ ಬಡಾವಣೆ ಬಳಿ ಟ್ಯೂಷನ್‌ನಿಂದ ಬರುತ್ತಿದ್ದ 13 ವರ್ಷದ ನಿಶ್ಚಿತ್‌ನನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಬಾಲಕನ ತಂದೆ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಆರೋಪಿಗಳು ಅವರಿಗೆ ಕರೆ ಮಾಡಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕೂಡಲೇ ಅವರು ಹುಳಿಮಾವು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಲೊಕೇಶನ್ ಟ್ರೇಸ್ ಮಾಡಿ ಹುಡುಕಾಟ ನಡೆಸಿದ್ದರು. ಗುರುವಾರ ಸಂಜೆ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬಾಲಕನ ಮೃತದೇಹ ಸುಟ್ಟ ರೀತಿಯಲ್ಲಿ ಪತ್ತೆಯಾಗಿತ್ತು.
ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಇಬ್ಬರನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳು ಲಾಂಗ್‌ನಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಸಬ್‌ಇನ್ಸ್‌ಪೆಕ್ಟರ್ ಅರವಿಂದ್ ಗಾಯಗೊಂಡಿದ್ದಾರೆ. ಆರೋಪಿಗಳನ್ನು ಜಯನಗರ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಗುರುಮೂರ್ತಿ ಸ್ಪೇರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಅದೇ ಮನೆಯಲ್ಲಿದ್ದ ಬಾಲಕನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದಕ್ಕೂ ಮುನ್ನ ಆರೋಪಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.