ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಠಾಣೆಯ ಶೌಚಾಲಯದಲ್ಲಿ ಬಂಧಿತ ಆರೋಪಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪದ ಹಿನ್ನೆಲೆ ಎಎಸ್ಐ ಸೇರಿ ಮೂವರು ಪೊಲೀಸ್ ಸಿಬ್ಬಂದಿಯನ್ನು
ಅಮಾನತು ಮಾಡಲಾಗಿದೆ.
ಎಎಸ್ಐ ನಾಗರಾಜು, ಕಾನ್ಸ್‌ಟೇಬಲ್‌ಗಳಾದ ಪ್ರತಾಪ್, ಲಕ್ಷ್ಮೀನಾರಾಯಣ ಹಾಗೂ ಸೋಮನಾಥ್ ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆದೇಶಿಸಿದ್ದಾರೆ. ಮದ್ದೂರು ತಾಲೂಕಿನ ದುಂಡನಹಳ್ಳಿ ನಿವಾಸಿ ರಮೇಶ್ ಕಳ್ಳತನ ಕೇಸ್‌ನಲ್ಲಿ ಆರೋಪಿ ರಮೇಶ್ ಅರೆಸ್ಟ್ ಆಗಿದ್ದು, ಆಗಸ್ಟ್ 20ರಂದು ಠಾಣೆಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೃತ ಆರೋಪಿಯು ಎರಡು ತಿಂಗಳ ಹಿಂದೆ ಚನ್ನಪಟ್ಟಣ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ದೇವಸ್ಥಾನದ ಬಾಗಿಲು ಒಡೆದು ಹುಂಡಿ ಕಳ್ಳತನ ಮಾಡಿದ್ದರು. ಆರೋಪಿ ರಮೇಶ್, ಮಂಜು ಹಾಗೂ ಶ್ರೀನಿವಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆಗಸ್ಟ್ 18ರಂದು ಚನ್ನಪಟ್ಟಣದ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆಂದು ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಬೆಳಗಿನ ಜಾವ ಶೌಚಕ್ಕೆಂದು ತೆರಳಿದ್ದ ವೇಳೆ ರಮೇಶ್ ಪಂಚೆಯಲ್ಲೇ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.