ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಡಿದ ಮತ್ತಿನಲ್ಲಿ ಸ್ನೇಹಿತನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಿಷಿ ತೇಜ್ ಎಂಬ ಯುವಕನ ಮೇಲೆ ಸ್ನೇಹಿತ ದಿವ್ಯ ತೇಜ್ ಎಂಬಾತ ಹಲ್ಲೆ ನಡೆಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಿವ್ಯ ತೇಜ್ ಸ್ನೇಹಿತ ರಿಷಿ ತೇಜ್‌ಗೆ ಮದ್ಯ ತರುವಂತೆ ಹೇಳಿ ಇಬ್ಬರೂ ತಡರಾತ್ರಿಯವರೆಗೆ ಒಟ್ಟಿಗೆ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ದಿವ್ಯ ತೇಜ್, ಕ್ಷುಲ್ಲಕ ಕಾರಣಕ್ಕೆ ರಿಷಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಬಿಯರ್ ಬಾಟಲಿಯಿಂದ ಹೊಡೆದು ರಕ್ತದ ಮಡುವಿನಲ್ಲಿ ಬೀಳಿಸಿದ್ದಾನೆ.
ನಂತರ ದಿವ್ಯ ತೇಜ್ ರಿಷಿಗೆ ಹೊಸ ಬಟ್ಟೆಯನ್ನು ತಂದುಕೊಟ್ಟಿದ್ದಾನೆ. ಈ ಬಟ್ಟೆಯನ್ನು ಧರಿಸಿ ಗಾಯಗೊಂಡ ರಿಷಿ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ರಿಷಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ದೂರು ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದಾಗ ಆರೋಪಿ ದಿವ್ಯ ತೇಜ್ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಕಂಡುಬಂದಿದೆ. ದಿವ್ಯ ತೇಜ್ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಾಮರಾಜನಗರ ಸರಣಿ ಅಪಘಾತದಲ್ಲಿ ಮೃತರ ಸಂಖ್ಯೆ ೪ ಕ್ಕೆ ಏರಿಕೆ
ಚಾಮರಾಜನಗರದ ಗಾಳಿಪುರ ಬೈಪಾಸ್ನಲ್ಲಿ ಶನಿವಾರ ಸಂಭವಿಸಿದ ಲಾರಿ, ಕಾರು ಮತ್ತು ದ್ವಿಚಕ್ರ ವಾಹನ ನಡುವಿನ ಸರಣಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ. ಮೆರಾನ್, ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್ ಮೃತಪಟ್ಟವರು. ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಣಿ ಅಪಘಾತದಲ್ಲಿ 10 ವರ್ಷದ ಮೆರಾನ್ ಸ್ಥಳದಲ್ಲೇ ಮೃತಪಟ್ಟಿದ್ದ. ಮೂವರ ಸ್ಥಿತಿ ಗಂಭೀರವಾಗಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್ ಮೃತಪಟ್ಟಿದ್ದಾರೆ.
ಈದ್ ಹಬ್ಬದ ಸಂಭ್ರಮದಲ್ಲಿದ್ದ ನಾಲ್ವರು ಬೈಕ್ ತೆಗೆದುಕೊಂಡು ಗಾಳಿಪುರದ ಬಳಿ ಇರುವ ಔಟರ್ ರಿಂಗ್ ರಸ್ತೆಗೆ ಬಂದಿದ್ದು, ಹೈವೆಯಲ್ಲಿ ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರು. ಬೈಕ್ ಹಿಂದೆಯೇ ಇದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದ ನಾಲ್ವರೂ ಹೆಲ್ಮೆಟ್ ಹಾಕದ ಕಾರಣ ತಲೆಗೆ ಏಟಾಗಿ ಮೃತಪಟ್ಟಿದ್ದಾರೆ.