ಬೆಂಗಳೂರು: ನನ್ನ ವಿಚ್ಚೇದಿತ ಪತ್ನಿಗೆ ಮಾನಸಿಕ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುತ್ತೇನೆ” ಎಂದು ಬಿಎಂಆರ್‌ಸಿಎಲ್ ಅಧಿಕೃತ ಖಾತೆಗೆ ಇ ಮೇಲ್ ನಲ್ಲಿ ಬೆದರಿಕೆ ಹಾಕಿದ್ದ ಮಾನಸಿಕ ಅಸ್ವಸ್ಥನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.
rajivsettyptp@gmail.com ಹೆಸರಿನ ಖಾತೆಯಿಂದ ನವೆಂಬರ್ 13ರಂದು ರಾತ್ರಿ 11:25ಕ್ಕೆ ಮೇಲ್ ರವಾನಿಸಿರುವ ಆರೋಪಿಯು ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಬಿಎಂಆರ್‌ಸಿಎಲ್ ಸಹಾಯಕ ನಿರ್ವಾಹಕ ಇಂಜಿನಿಯರ್ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆಲಸದ ಅವಧಿ ಮುಗಿದ ನಂತರವೂ ನನ್ನ ವಿಚ್ಚೇದಿತ ಪತ್ನಿಗೆ ಮೆಟ್ರೋದ ಯಾವುದೇ ಉದ್ಯೋಗಿಗಳು ಮಾನಸಿಕ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದರೆ, ಎಚ್ಚರವಿರಲಿ. ನಿಮ್ಮ ನಿಲ್ದಾಣವೊಂದನ್ನ ಸ್ಪೋಟಿಸಲಾಗುತ್ತದೆ” ಎಂದು ಕಿಡಿಗೇಡಿ ಈಮೇಲ್ ಸಂದೇಶ ಕಳಿಸಿದ್ದಾನೆ. ಜೊತೆಗೆ ತನ್ನನ್ನ ತಾನು ಕನ್ನಡಿಗರ ವಿರೋಧಿ ದೇಶಭಕ್ತ ಎಂದು ಕರೆದುಕೊಂಡಿದ್ದಾನೆ.
ಆರೋಪಿ ಬಂಧನ ಚಿಕಿತ್ಸೆ:
ಪ್ರಕರಣ ದಾಖಲಿಸಿಕೊಂಡಿರುವ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿ ರಾಜೀವ್ (62)ನನ್ನು ಬಂಧಿಸಲಾಗಿದ್ದು, ಆತ ಮಾನಸಿಕವಾಗಿ ಅಸ್ವಸ್ಥನಿರುವ ಶಂಕೆಯಿದೆ. ಆರೋಪಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ನಂತರ ಆತ ಯಾವ ಕಾರಣದಿಂದ ಬೆದರಿಕೆ ಮೇಲ್ ಕಳುಹಿಸಿದ್ದ ಎಂದ ವಿಚಾರಣೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
15 ವರ್ಷದ ಹಿಂದೆ ವಿಚ್ಚೇದನ:
ಬಂಧಿತ ಆರೋಪಿಯು 15 ವರ್ಷಗಳ ಹಿಂದೆಯೇ ಪತ್ನಿಯಿಂದ ವಿಚ್ಚೇದನ ಪಡೆದಿದ್ದು, ಆದರೆ ಅವರು ಬಿಎಂಆರ್‌ಸಿಎಲ್ ಉದ್ಯೋಗಿಯಾಗಿರಲಿಲ್ಲ. ಆರೋಪಿಯು ಮಾನಸಿಕ ಸಮಸ್ಯೆ ಹೊಂದಿದ್ದು, ಕಳೆದ ಐದು ವರ್ಷಗಳಿಂದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬೆಳತ್ತೂರು ಬಳಿ ಬಾಡಿಗೆ ರೂಮ್‌ನಲ್ಲಿ ಒಬ್ಬನೇ ವಾಸವಿದ್ದ ಆರೋಪಿಯ ನಿತ್ಯದ ಅಗತ್ಯತೆಗಳಿಗೆ ಕುಟುಂಬದ ಸದಸ್ಯರು, ಸ್ನೇಹಿತರು ಸಹಾಯ ಮಾಡುತ್ತಿದ್ದರು ಎಂದು ತಿಳಿದು ಬಂದಿರುವುದಾಗಿ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ ಹಕೇ ತಿಳಿಸಿದ್ದಾರೆ.


