ರಾಜ್ಯಪಾಲರಿಗೆ ಜಂಟಿ ಅಧಿವೇಶನದಲ್ಲಿ ಭಾಗವಹಿಸದೆ ಗೈರು ಹಾಜರಾಗುವ ಅವಕಾಶ ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ನರೇಗಾ ಕಾಯಿದೆಯನ್ನು ಕೇಂದ್ರ ಸರ್ಕಾರ ತಿದ್ದುಪಡಿಗೊಳಿಸಿರುವ ಹಿನ್ನಲೆಯಲ್ಲಿ, ಇದರ ಸುದೀರ್ಘ ಚರ್ಚೆಗೆ ವಿಶೇಷ ಜಂಟಿ ಅಧಿವೇಶನವನ್ನು ರಾಜ್ಯ ಸರ್ಕಾರ ಕರೆದಿದೆ. ಆದರೆ ಇದಕ್ಕೆ ರಾಜ್ಯಪಾಲರು ಕೆಲವೊಂದು ಸ್ಪಷ್ಟೀಕರಣಗಳನ್ನು ಮುಖ್ಯ ಕಾರ್ಯದರ್ಶಿಗಳಿಗೆ ಕೇಳಿದ್ದಾರೆ. ಜಂಟಿ ಅಧಿವೇಶನದ ಉದ್ದೇಶವನ್ನು ರಾಜ್ಯ ಸರ್ಕಾರದ ಪ್ರಮುಖ ಸಚಿವರು ಖುದ್ದುಲೋಕಭವನಕ್ಕೆ ತೆರಳಿ ರಾಜ್ಯಪಾಲರ ಮನವೊಲಿಸಲು ಕಸರತ್ತು ನಡೆಸಿದ್ದಾರೆ.
ಸಂವಿಧಾನದ ಆರ್ಟಿಕಲ್ 163, 176 ಹೇಳುವುದೇನು?
ಸಂವಿಧಾನದ ಆರ್ಟಿಕಲ್ 176 ಮತ್ತು 163ರ ಅನ್ವಯ ರಾಜ್ಯಪಾಲರು ಸರ್ಕಾರ ಕರೆದ ವರ್ಷದ ಮೊದಲ ಅಧಿವೇಶನದಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು. ಇದು ಸಂವಿಧಾನ ವಿಧಿಸಿರುವ ನಿಯಮ. ಸರ್ಕಾರದ ತೀರ್ಮಾನವನ್ನು ನಿರಾಕರಿಸಲುರಾಜ್ಯಪಾಲರಿಗೆ ಅವಕಾಶವಿಲ್ಲ. ಸಂವಿಧಾನದ ಈ ನಿಯಮಾವಳಿಗಳನ್ನು ಪುಷ್ಟೀಕರಿಸುವ ಸುಪ್ರೀಂಕೋರ್ಟ್‌ನ 2 ಪ್ರಮುಖ ತೀರ್ಪುಗಳು ಇಲ್ಲಿವೆ:
ಸುಪ್ರೀಂಕೋರ್ಟ್ ತೀರ್ಪುಗಳೇನು?
ಸಂಶೇರ್ ಸಿಂಗ್ ವರ್‍ಸ್‌ಸ್ ಪಂಜಾಬ್ : 1974ರಲ್ಲಿ ಪಂಜಾಬ್‌ನಲ್ಲಿ ಅಂದಿನ ಸರ್ಕಾರ ಮತ್ತು ರಾಜ್ಯಪಾಲರ ನಡಾವಳಿ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ರಾಜ್ಯ ಸರ್ಕಾರದ ಶಿಫಾರಸುಗಳನ್ನು ರಾಜ್ಯಪಾಲರು ಧಿಕ್ಕರಿಸುವಂತಿಲ್ಲ. ಸಂವಿಧಾನದ ಆರ್ಟಿಕಲ್ 163ರ ಪ್ರಕಾರ ರಾಜ್ಯಪಾಲರು ಅಧಿವೇಶನಕ್ಕೆ ಗೈರಾಗಲು ಅವಕಾಶವಿಲ್ಲ ಮತ್ತು ಇವರು ಈ ದಿಶೆಯಲ್ಲಿ ಸ್ವತಂತ್ರರಲ್ಲ ಶಲ್ ಬೌಂಡ್ ಬೈ ದಿ ರೆಕಮೆಂಡೇಷನ್ ಆಫ್ ದಿ ಕೌನ್ಸಿಲ್ ಆಫ್ ಮಿನಿಷ್ಟ್ರಿ . . ಎಂಬ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಅರುಣಾಚಲಪ್ರದೇಶ ವರ್ಸಸ್ ಡೆಪ್ಯುಟಿ ಸ್ಪೀಕರ್ ಪ್ರಕರಣದಲ್ಲಿಯೂ ಸುಪ್ರೀಂಕೋರ್ಟ್ ಸಂವಿಧಾನದ ಆರ್ಟಿಕಲ್ 176 ಅನ್ನು ಉಲ್ಲೇಖಿಸಿ ರಾಜ್ಯಪಾಲರು ಸರ್ಕಾರ ಶಿಫಾರಸುಗಳ ಪ್ರಕಾರ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಬೇಕಿದೆ ಎಂದು ತೀರ್ಪು ನೀಡಿದೆ.
ರಾಜ್ಯಪಾಲರ ಮುಂದಿರುವ ಆಯ್ಕೆ: ರಾಜ್ಯ ಸರ್ಕಾರವೀಗ ಗುರುವಾರದಂದು ಕರೆದಿರುವ ಜಂಟಿ ಅಧಿವೇಶನದಲ್ಲಿ ಭಾಗವಹಿಸಬಹುದು. ಹೀಗಾದರೆ ಸಂವಿಧಾನದ ನಿಯಮಾವಳಿಗೆ ಭಂಗವಾಗದು ಮತ್ತು ಸರ್ಕಾರ ಸಿದ್ದಪಡಿಸಿರುವ ಭಾಷಣವನ್ನು ರಾಜ್ಯಪಾಲರು ಓದದೆ ಸುಮ್ಮನಾಗಬಹುದು.
ರಾಜ್ಯಪಾಲರು ಗೈರಾದರೆ ಸರ್ಕಾರದ ಮುಂದಿರುವ ಆಯ್ಕೆ: ರಾಜ್ಯಪಾಲರ ಗೈರನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಅವಕಾಶವಿದೆ. ಇದಕ್ಕೂ ಮುನ್ನ ಸರ್ಕಾರದ ಈಗಿನ ಅಜೆಂಡಾ ಪ್ರಕಾರ ಜಂಟಿ ಅಧಿವೇಶನ ನಡೆಯಲಿದೆ.
ಒಟ್ಟಿನಲ್ಲಿ ಗುರುವಾರದಂದು ರಾಜ್ಯಪಾಲರು ಶಾಸನಸಭೆಗೆ ಖುದ್ದು ಹಾಜರಾಗುವರೇ ಇಲ್ಲವೇ ಎಂಬುದರ ಮೇಲೆ ಸರ್ಕಾರದ ಮುಂದಿನ ಕೂನೂನು ಕ್ರಮಗಳು ಆರಂಭವಾಗಲಿವೆ. ಏಕಂದರೆ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಕಾರಣ (ಕಾಸ್ ಆಫ್ ಆಕ್ಷನ್) ಇನ್ನೂ ತಲೆದೋರಿಲ್ಲ.


