ಶಿಡ್ಲಘಟ್ಟ ಪೌರಾಯುಕ್ತರೊಂದಿಗೆ ಅವಹೇಳನಕಾರಿಯಾಗಿ ಮಾತನಾಡಿ ಬೆದರಿಕೆ ಹಾಕಿದ್ದ ಪ್ರಕರಣದ ಆರೋಪಿ ರಾಜೀವ್ ಗೌಡ ತಲೆ ಮರೆಸಿಕೊಂಡು ಮಂಗಳೂರಿಗೆ ಹೋಗಿದ್ದು, ಈಗ ಅಲ್ಲಿಂದಲೂ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ.
ಆರೋಪಿಯ ಬಂಧನ ವಿಳಂಬ ಆಗುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಪರಮೇಶ್ವರ್ ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಹೇಳಿದ್ದಾರೆ. ಆರೋಪಿ ಕೆಲವು ದಿನಗಳಿಂದ ಮಂಗಳೂರಿನಲ್ಲಿದ್ದ ಬಗ್ಗೆ ಮಾಹಿತಿ ದೊರೆತಿದೆ. ಆದರೆ ಈಗ ಅಲ್ಲಿಂದಲೂ ಪರಾರಿಯಾಗಿರುವುದಾಗಿ ಹೇಳಲಾಗುತ್ತಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.
ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂಸಿ ಸುಧಾಕರ್ ಬಳಿ ಮಾಹಿತಿ ಪಡೆದಿರುವ ಮುಖ್ಯಮಂತ್ರಿ, ನ್ಯಾಯಾಲಯಗಳಲ್ಲಿ ಜಾಮೀನು ಅರ್ಜಿ ವಜಾ ಆಗಿದ್ದರೂ ಯಾಕೆ ಆತನನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ರಾಜೀವ್ ಗೌಡ ಮಂಗಳೂರಿನಿಂದ ಬೆಂಗಳೂರಿನಲ್ಲಿರುವ ಸಹೋದರಿಗೆ ಕರೆ ಮಾಡಿದ್ದ. ಮೂರು ದಿನಗಳಿಂದ ರಾಜೀವ್ ಗೌಡ ಮಂಗಳೂರಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಸಹೋದರಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರಾಜೀವ್ ಗೌಡ ಅದಾಗಲೇ ಮಂಗಳೂರಿನಿಂದಲೂ ಪರಾರಿಯಾಗಿದ್ದಾನೆ. ರೈಲ್ವೆ ಸ್ಟೇಷನ್ನಲ್ಲಿ ಕಾರು ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ದೊರೆತಿದೆ. ಕಾರು ಸಂಚರಿಸಿರುವ ಮಾರ್ಗ ಆಧರಿಸಿ ಮಂಗಳೂರು ರೈಲ್ವೆ ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆಯ ಸಿಸಿ ಟಿವಿಗಳ ಪರಿಶೀಲನೆ ನಡೆಸಲಾಗಿದೆ.
ಆರೋಪಿ ರಾಜೀವ್ ಗೌಡ ಪತ್ನಿ ಸಹನಾ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ, ಮನೆ ಕೆಲಸದವರ ಸಮ್ಮುಖದಲ್ಲಿ ಆರೋಪಿ ಮನೆಯಲ್ಲಿ ಶೋಧ ನಡೆಸಲಾಗಿದೆ. ಬೆಂಗಳೂರಿನ ಸಂಜಯ್ ನಗರ, ಡಾಲರ್ಸ್ ಕಾಲೋನಿಯಲ್ಲಿರುವ ಮನೆಗಳಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ಶೋಧಿಸಿದ್ದಾರೆ.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೌರಾಯುಕ್ತೆಗೆ ನಿಂದಿಸಿದ್ದ ರಾಜೀವ್ ಗೌಡ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತುಗೊಳಿಸಿದೆ. ಕಲ್ಟ್ ಚಿತ್ರದ ಬ್ಯಾನರ್ ವಿಷಯದಲ್ಲಿ ಪೌರಾಯುಕ್ತೆ ನಿರ್ಮಲಾ ಗೌಡ ಅವರಿಗೆ ದೂರವಾಣಿಯಲ್ಲಿ ಅಶ್ಲೀಲವಾಗಿ ನಿಂದಿಸಿದ್ದ ರಾಜೀವ್ ಗೌಡ ಅವರನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಕಾಂಗ್ರೆಸ್ ಪಕ್ಷ ಆದೇಶ ಹೊರಡಿಸಿದೆ.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಬಗ್ಗೆ ಆದೇಶ ನೀಡಿದೆ.


