ಧರ್ಮಸ್ಥಳದಲ್ಲಿ ಅಸಹಜ ಸಾವುಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ವೀಡಿಯೊ ಪೋಸ್ಟ್ ಮಾಡಿರುವ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಎಂಡಿ ಸಮೀರ್ ಅವರಿಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಸಮೀರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ನ್ಯಾಯಾಲಯ ತಡೆ ನೀಡಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಎಂಡಿ ಸಮೀರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ವಾದ-ಪ್ರತಿವಾದಗಳನ್ನು ಆಲಿಸಿದ ಪೀಠವು ತನಿಖೆಗೆ ತಡೆ ನೀಡಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಸಮೀರ್ ಪರ ವಕೀಲರು, ಯೂಟ್ಯೂಬ್ನಲ್ಲಿ ವೀಡಿಯೊ ಪೋಸ್ಟ್ ಹಾಕಿದ್ದಕ್ಕೆ ಪೊಲೀಸರು ಸಾರ್ವಜನಿಕ ಶಾಂತಿ ಭಂಗದ ನೆಪದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ ಎಂದು ವಾದಿಸಿದರು. ಆಗ ನ್ಯಾಯಾಧೀಶರು ಪ್ರತಿಕ್ರಿಯಿಸಿ, ಯಾರ ನೆಮ್ಮದಿ ಹಾಳು ಮಾಡಿದ್ದೀರಿ ಎಂದು ನಮಗೆ ತಿಳಿದಿದೆ. ಅದು ಕೇವಲ ಸಾರ್ವಜನಿಕರ ನೆಮ್ಮದಿ ಮಾತ್ರವಲ್ಲ ಎಂದರು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕಿ ಅಸ್ಮಾ ಕೌಸರ್ ಅವರು ತನಿಖೆಗೆ ತಡೆ ನೀಡುವುದನ್ನು ಬಲವಾಗಿ ವಿರೋಧಿಸಿದರು. ಸಮೀರ್ ಕೇವಲ ವೀಡಿಯೊ ಮಾಡಿದ್ದಲ್ಲ, ಎಐ ತಂತ್ರಜ್ಞಾನ ಬಳಸಿ ಸತ್ತವರ ಶವಗಳನ್ನು ಹೂಳಲಾಗಿದೆ ಎಂಬ ಸುಳ್ಳು ದೃಶ್ಯಗಳನ್ನು ಸೃಷ್ಟಿಸಿದ್ದಾರೆ. ಇದು ಸಾಕ್ಷಿ ಸಂರಕ್ಷಣಾ ಯೋಜನೆಯಡಿ ರಕ್ಷಣೆ ಪಡೆದಿದ್ದ ದೂರುದಾರರ ಗುರುತು ಬಹಿರಂಗಪಡಿಸುವ ಸಂಚಿನ ಭಾಗವೂ ಆಗಿದೆ. ಸಮೀರ್ ವಿರುದ್ಧ ಈಗಾಗಲೇ ಐದು ಪ್ರಕರಣಗಳಿದ್ದು, ಜನರನ್ನು ಹಾದಿ ತಪ್ಪಿಸಿ ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾನೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಬಗ್ಗೆ ಸಮೀರ್ ‘ದೂತ’ ಯೂಟ್ಯೂಬ್ ಚಾನಲ್ನಲ್ಲಿ ವೀಡಿಯೊ ಅಪ್ಲೋಡ್ ಮಾಡಿ, ಸಾವಿರಾರು ಜನರನ್ನು ರೇಪ್ ಮಾಡಿ ಕೊಲೆ ಮಾಡಿ ಮುಚ್ಚಿ ಹಾಕಿದ್ದಾರೆ. ಕರ್ನಾಟಕದ ಜನ ಬೀದಿಗೆ ಇಳಿದು ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದನು. ಧರ್ಮಸ್ಥಳ ಪೊಲೀಸರು 2025ರ ಜುಲೈ 12ರಂದು ಬಿಎನ್ಎಸ್ ಸೆಕ್ಷನ್ಗಳಾದ 240, 192 ಮತ್ತು 353(1)(b) ಅಡಿ ಪ್ರಕರಣ ದಾಖಲಿಸಿದ್ದರು.


