ಆರಂಭಿಕ ಅಭಿಷೇಕ್ ಶರ್ಮ ಅರ್ಧಶತಕದ ಹೊರತಾಗಿಯೂ ಅಲ್ಪ ಮೊತ್ತಕ್ಕೆ ಕುಸಿದ ಭಾರತ ತಂಡ 4 ವಿಕೆಟ್ ಗಳಿಂದ ಸೋಲುಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ 5 ಪಂದ್ಯಗಳ ಟಿ-20 ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ಮೆಲ್ಬೋರ್ನ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 18.4 ಓವರ್ ಗಳಲ್ಲಿ 125 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟಾಯಿತು. ಸುಲಭ ಗುರಿ ಬೆಂಬತ್ತಿದ ಆಸ್ಟ್ರೇಲಿಯಾ ತಂಡ 18.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ 46 ರನ್ ಬಾರಿಸಿದರೆ, ಟ್ರಾವಿಸ್ ಹೆಡ್ (28) ಮತ್ತು ಜೋಸ್ ಇಂಗ್ಲೀಷ್ (20) ಉತ್ತಮ ಕಾಣಿಕೆ ನೀಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಅನುಭವಿಸಿದರೂ ಗುರಿ ಅಲ್ಪವಾಗಿದ್ದರಿಂದ ಸುಲಭ ಜಯ ದಾಖಲಿಸಿತು. ಭಾರತದ ಪರ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಸತತ ಕುಸಿತ ಅನುಭವಿಸಿತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಎದೆಗುಂದದ ಅಭಿಷೇಕ್ ಶರ್ಮ 37 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 68 ರನ್ ಬಾರಿಸಿ ಔಟಾದರು.
ಒಂದು ಹಂತದಲ್ಲಿ ಭಾರತ 49 ರನ್ ಗೆ 5 ವಿಕೆಟ್ ಕಳೆದುಕೊಂಡು 100ರ ಗಡಿ ದಾಟುವುದು ಕೂಡ ಕಷ್ಟವಾಗಿತ್ತು. ಆದರೆ ಅಭಿಷೇಕ್ ಮತ್ತು ಹರ್ಷಿತ್ ರಾಣಾ 6ನೇ ವಿಕೆಟ್ ಗೆ 56 ರನ್ ಜೊತೆಯಾಟದಿಂದ ತಂಡವನ್ನು 100ರ ಗಡಿ ದಾಟಿಸಿದರು. ರಾಣಾ 33 ಎಸೆತಗಳಲ್ಲಿ 3 ಬೌಂಡರಿಗಳಲ್ಲಿ 1 ಸಿಕ್ಸರ್ ನೊಂದಿಗೆ 35 ರನ್ ಬಾರಿಸಿದರು.

 


