ಚೆನ್ನೈನ ಕಿಲಂಬಕ್ಕಂ ಟರ್ಮಿನಸ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಯುವತಿ ಬಸ್ಸಿಗಾಗಿ ಕಾಯುತ್ತಿದ್ದಾಗ ಆಟೋದಲ್ಲಿ ಬಂದ ಮೂವರು ಆಕೆಯನ್ನು ಅಪಹರಿಸಿದ್ದರು. ಆಟೋ ಚಾಲಕ ಸೇರಿ ಮೂವರು ಚಾಕು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ.
ತಾಂಬರಂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆ ಮೂವರು ಬೇರೊಂದು ಆಟೋದಲ್ಲಿ ಕುಳಿತುಕೊಳ್ಳುವಂತೆ ಹೇಳಿ ಕೊಯಂಬೇಡುವಿನಲ್ಲಿ ಬಿಡಲು ಹೇಳಿದ ಬಳಿಕ ಯುವತಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ.
ಆಟೋ ಚಾಲಕ ಚೆನ್ನೈನಲ್ಲಿರುವ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಲು ಸಹಾಯ ಮಾಡಿದ್ದಾನೆಂದು ಯುವತಿ ಹೇಳಿದ್ದಾಳೆ. ಅಪಹರಣಕ್ಕೊಳಗಾಗಿದ್ದಾಗ ಆಟೋದಲ್ಲಿ ಆಕೆಗೆ ಚಿತ್ರಹಿಂಸೆ ನೀಡುತ್ತಿರುವುದನ್ನು ನೋಡಿದ್ದ ಜನರು ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದರು. ಮಧ್ಯರಾತ್ರಿ ಕೊಯೆಂಬೆಡು ಬಳಿ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.
ಸೇಲಂನಲ್ಲಿ ಮನೆಯೊಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು, ಮಾಧವರಂನಲ್ಲಿರುವ ತನ್ನ ಸಂಬಂಧಿಯನ್ನು ಭೇಟಿ ಮಾಡಲು ಚೆನ್ನೈಗೆ ಬಂದಿದ್ದಳು. ಕಿಲಂಬಕ್ಕಂನಲ್ಲಿ ರಾತ್ರಿ 11 ಗಂಟೆಗೆ ಬಸ್ಸಿನಿಂದ ಇಳಿದು ಮಾಧವರಂಗೆ ಹೋಗುವ ಬಸ್ ಹತ್ತಲು ಕಾಯುತ್ತಿದ್ದಳು. ಬಸ್ ಸಿಗದಿದ್ದಾಗ ಟರ್ಮಿನಸ್‌ನಿಂದ ಹೊರಬಂದ ಆಕೆಗೆ ಡ್ರಾಪ್ ಕೊಡುವುದಾಗಿ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೌನ್ಸೆಲಿಂಗ್ ನಡೆಸಲಾಗಿದೆ.