ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ರೆಸಾರ್ಟ್‌ವೊಂದರಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದಾಗ ನೃತ್ಯ ಮಾಡುತ್ತಿದ್ದ ೨೩ ವರ್ಷದ ಯುವತಿ ಹೃದಯ ಸ್ತಂಭನ ಗೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಯುವತಿಯನ್ನು ಇಂದೋರ್ ನಿವಾಸಿ ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ.
ಸೋದರ ಸಂಬಂಧಿ ಮದುವೆಯಲ್ಲಿ ಆಕೆ ಪಾಲ್ಗೊಂಡಿದ್ದು, 200ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು. ಪರಿಣಿತಾ ವೇದಿಕೆಯಲ್ಲಿ ಬಾಲಿವುಡ್ ಗೀತೆಯೊಂದಕ್ಕೆ ನೃತ್ಯ ಮಾಡುತ್ತಿದ್ದಾಗಲೇ ಹೃದಯ ಸ್ತಂಭನಗೊಂಡು ಅಸು ನೀಗಿದ್ದಾರೆ. ಆಕೆ ಕುಸಿದು ಬಿದ್ದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೈದ್ಯರು ಆಕೆಗೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ನೀಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ತಕ್ಷಣ ಅಲ್ಲಿಂದ ಖಾಸಗಿ ಅಸ್ಪತ್ರೆಗೆ ಕರೆದೊಯ್ಯಲಾಯಿತು, ಅಷ್ಟರಲ್ಲಿ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಎಂಬಿಎ ಪದವೀಧರೆಯಾಗಿದ್ದ ಪರಿಣಿತಾ ಪೋಷಕರೊಂದಿಗೆ ಇಂದೋರ್‌ನ ದಕ್ಷಿಣ ತುಕೋಗಂಜ್‌ನಲ್ಲಿ ವಾಸಿಸುತ್ತಿದ್ದರು. ಆಕೆಯ ಸಹೋದರ 12ನೇ ವಯಸ್ಸಿನಲ್ಲೇ ಹೃದಯಾ ಘಾತದಿಂದ ಮೃತಪಟ್ಟಿದ್ದ ಎನ್ನಲಾಗಿದೆ.