ಸೋಶಿಯಲ್ ಮೀಡಿಯಾದಲ್ಲಿ ಯುವತಿಗೆ ಬರ್ತ್‌ಡೇ ವಿಶ್ ಮಾಡಿದ ಕಾರಣಕ್ಕೆ ಯುವಕನೊಬ್ಬ ಕೊಲೆಯಾಗಿ ಹೋದ ಘಟನೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ. ಉಡೇವಾ ಗ್ರಾಮದ ನಿವಾಸಿ ಮಂಜುನಾಥ್ (28) ಎಂಬ ಯುವಕನನ್ನು ವೇಣು ಹಾಗೂ ಅವನ ಸ್ನೇಹಿತರು ಕೊಲೆ ಮಾಡಿದ್ದಾರೆ.
ಕೊಲೆಯಾಗಿ ಹೋಗಿರುವ ಮಂಜುನಾಥ್ ಸೋಶಿಯಲ್ ಮೀಡಿಯಾ ಮೂಲಕ ಯುವತಿಗೆ ಬರ್ತ್‌ಡೇ ವಿಶ್ ಮಾಡಿದ್ದ. ಆ ಯುವತಿಯ ವಿವಾಹ ವೇಣು ಎಂಬ ಯುವಕನೊಂದಿಗೆ ನಿಶ್ಚಯವಾಗಿತ್ತು. ಮಂಜುನಾಥ್ ಆಕೆಗೆ ವಿಶ್ ಮಾಡಿದ ವಿಚಾರದಿಂದ ಕೋಪಗೊಂಡ ವೇಣು ಹಾಗೂ ಸ್ನೇಹಿತರು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಂಜುನಾಥ್ ಅತ್ತಿಗನಾಳು ಗ್ರಾಮಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದಾಗ ವೇಣು ಮತ್ತು ಅವನ ಸ್ನೇಹಿತರು ಅಡ್ಡಗಟ್ಟಿ ಗಲಾಟೆ ಮಾಡಿ ಚಾಕು ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್‌ನನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೃತ ಮಂಜುನಾಥ್ ಹಾಗೂ ಯುವತಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹುಡುಗಿ ಮನೆಯವರು ಬೇರೆ ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಆಕೆಯ ಹುಟ್ಟು ಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಂಜು ವಿಶ್ ಮಾಡಿದ್ದ. ಆಕೆ ಜೊತೆ ಮದುವೆ ನಿಶ್ಚಯಿಸಿಕೊಂಡಿದ್ದ ವೇಣು ಸ್ನೇಹಿತರ ಜೊತೆಗೂಡಿ ಮಂಜುನಾಥ್ ಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.
ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ ಕಾರಣಕ್ಕೆ ಹೀಗೆ ಕೊಲೆ ಮಾಡಿರುವುದಕ್ಕೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.


